ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇನ್ನು ಮುಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಭ್ಯ – ಸಿಎಂ ಬೊಮ್ಮಾಯಿ


ಹಾವೇರಿ : ಗ್ರಾಮೀಣ ಜನತೆಗೆ ಅನುಕೂಲವಾಗುವಂತೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಸಂಧ್ಯಾ ಸುರಕ್ಷಾ ಸೇರಿದಂತೆ ಹಲವಾರು ಸೇವೆಗಳಿಗಾಗಿ ಅಲೆದಾಡುವುದನ್ನು ತಡೆಯಲು ಈ ಎಲ್ಲಾ ಸೇವೆಗಳು ಗ್ರಾಮಪಂಚಾಯಿತಿ ಮಟ್ಟದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ್‍ನ ಬಿಸನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಗ್ರಾಮೀಣ ಭಾಗದ ಜನರು ಕೆಲವು ಸೇವೆಗಳಿಗಾಗಿ ತಾಲೂಕು ಕೇಂದ್ರಕ್ಕೆ ಹೋಗುವುದನ್ನು ತಪ್ಪಿಸುವ ಸಲುವಾಗಿ 2022ರ ಗಣರಾಜ್ಯೋತ್ಸವ ದಿನದಿಂದ ಗ್ರಾಮಪಂಚಾಯಿತಿಗಳಲ್ಲಿ ಜಾತಿ, ಆದಾಯ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ ಸೇರಿದಂತೆ ಹಲವಾರು ಸೇವೆಗಳನ್ನು ನೀಡಲು ಸಿದ್ದತೆ ನಡೆಸಲಾಗಿದ್ದು, ಅದಕ್ಕೆ ಪೂರ್ವಭಾವಿಯಾಗಿ ಇಂಟರ್ನೆಟ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ 750 ಗ್ರಾಮಪಂಚಾಯ್ತಿಗಳನ್ನು ಅಮೃತ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. 2022ರ ಮಾರ್ಚ್ ವೇಳೆ ಈ ಪಂಚಾಯ್ತಿಗಳಲ್ಲಿ ಶುದ್ದ ಕುಡಿಯುವ ನೀರು, ರಸ್ತೆ, ವಸತಿ ಯೋಜನೆ ಜಾರಿ ಸೇರಿದಂತೆ ಸಮಗ್ರ ಅಭಿವೃದ್ಧಿಯಾಗಬೇಕು. ಅಲ್ಲದೆ 75 ಸಾವಿರ ಗ್ರಾಮೀಣ ಭಾಗದ ಯುವಕರಿಗೆ ಕೌಶಲ್ಯ ತರಬೇತಿ, 7500 ಸ್ತ್ರೀ ಶಕ್ತಿ ಸಂಘಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
