ಭಾರತದ ಕಂಪನಿ ಸೇರಿದಂತೆ ಒಟ್ಟು ಏಳು ಕಂಪೆನಿಗಳನ್ನು ಬ್ಯಾನ್ ಮಾಡಿದ ಫೇಸ್‌ಬುಕ್ !! | ಬ್ಯಾನ್ ಮಾಡಲು ಕಾರಣ??
ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣವೆಂದರೆ ಫೇಸ್‌ಬುಕ್. ಆದರೆ ಇದೇ ಫೇಸ್‌ಬುಕ್ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಳ್ಳಲು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತದ ಒಂದು ಕಂಪೆನಿ ಸೇರಿದಂತೆ ಏಳು ಖಾಸಗಿ ಪತ್ತೆದಾರಿ(ಸ್ಪೈ) ಸಂಸ್ಥೆಗಳನ್ನು ತನ್ನ ಪ್ಲಾಟ್‌ಫಾರಂನಿಂದ ಫೇಸ್‌ಬುಕ್ ಬ್ಯಾನ್ ಮಾಡಿದೆ.
ಹ್ಯಾಕಿಂಗ್ ಹಾಗೂ ಇತರ ಸೈಬರ್ ಅಪರಾಧಗಳನ್ನು ಗುರುತಿಸಿದ ಫೇಸ್‌ಬುಕ್ ಅವುಗಳ ಹೆಸರನ್ನು ಬಹಿರಂಗ ಪಡಿಸಿದ್ದು, ಇದರಲ್ಲಿ ಒಂದು ಭಾರತೀಯ ಸಂಸ್ಥೆಯೂ ಸೇರಿರುವುದು ಆಘಾತಕಾರಿ ಸಂಗತಿಯಾಗಿದೆ. ಭಾರತೀಯ ಕಂಪನಿ ಬೆಲ್ಟ್ರೋಕ್ಸ್ ಸೇರಿದಂತೆ ಬ್ಲ್ಯಾಕ್ ಕ್ಯೂಬ್, ಬ್ಲೂಹಾಕ್ ಸಿಐ, ಸೈಟ್ರೋಕ್ಸ್ ಹೀಗೆ ಒಟ್ಟು ಏಳು ಸಂಸ್ಥೆಗಳ ಹೆಸರುಗಳನ್ನು ಬಹಿರಂಗ ಪಡಿಸಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಪ್‌ಗಳಲ್ಲಿ ಈ ಏಳು ಸಂಸ್ಥೆಗಳು ಹೊಂದಿದ್ದ ಸುಮಾರು 1,500 ನಕಲಿ ಖಾತೆಗಳನ್ನು ಅಮಾನತುಗೊಳಿಸಿದೆ.
ಅಮೇರಿಕನ್ ಟೆಕ್ ಕಂಪನಿಗಳು, ಅಮೆರಿಕದ ಸಂಸದರು, ಅಧ್ಯಕ್ಷ ಜೋ ಬೈಡನ್ ಹೀಗೆ ಉನ್ನತ ಅಧಿಕಾರಿಗಳು ಈ ಪತ್ತೆದಾರಿ ಸಂಸ್ಥೆಗಳ ಟಾರ್ಗೆಟ್ ಆಗಿದ್ದರು ಎಂದು ವರದಿಯಾಗಿದೆ. ಮುಖ್ಯವಾಗಿ ಇಸ್ರೆಲ್‌ನ ಸ್ಪೈವೇರ್ ಕಂಪನಿ ಎನ್‌ಎಸ್‌ಒ ಗ್ರೂಪ್ ಈ ತಿಂಗಳ ಆರಂಭದಲ್ಲಿಯೇ ಕಪ್ಪು ಪಟ್ಟಿಗೆ ಸೇರಿತ್ತು.
ಈ ಹ್ಯಾಕಿಂಗ್ ಸಂಸ್ಥೆಗಳು ನೂರಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು 50 ಸಾವಿರ ಜನರನ್ನು ಗುರಿಯಾಗಿಸಿಕೊಂಡಿತ್ತು ಎಂದು ವರದಿಯಾಗಿದೆ. ಮೆಟಾ ಈ ಬೇಹುಗಾರಿಕಾ ಸಂಸ್ಥೆಗಳನ್ನು ಹೇಗೆ ಗುರುತಿಸಿತು ಎಂಬುದರ ಬಗ್ಗೆ ವಿವರವಾಗಿ ತಿಳಿಸಿಲ್ಲ. ಫೇಸ್‌ಬುಕ್ ದೊಡ್ಡ ನೆಟ್‌ವರ್ಕ್ ಹೊಂದಿದ್ದು ಈ ಮೂಲಕ ಫೇಕ್ ಮತ್ತು ಹ್ಯಾಕಿಂಗ್ ಮೂಲಗಳನ್ನು ಆಗಾಗ ಹುಡುಕಿ ತೆಗೆದು ಹಾಕುತ್ತಿರುತ್ತದೆ.