ಕೋವಿಶೀಲ್ಡ್ ಕೋವ್ಯಾಕ್ಸಿನ್ ಲಸಿಕೆಗಿಂತ ಕಡಿಮೆ ಪ್ರತಿರೋಧಕ ಸುದ್ದಿ ಸುಳ್ಳು | ಅಧ್ಯಯನದಲ್ಲಿ ಬಹಿರಂಗ
ಇತ್ತೀಚೆಗೆ ಲಸಿಕೆಗಳ ಪೈಕಿ ಕೋವಿ ಶೀಲ್ಡ್ ಕೋವ್ಯಾಕ್ಸಿನ್ ಗಿಂತ ಕಡಿಮೆ ಪ್ರತಿರೋಧ ಶಕ್ತಿ ಹೊಂದಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಸುದ್ದಿ ನಂಬುವಂತದ್ದಲ್ಲ ಎಂದು ಅಧ್ಯಯನದ ವರದಿಯೊಂದು ಹೇಳುತ್ತಿದೆ.
ಕೋವಿಶೀಲ್ಡ್ನ ಎರಡು ಡೋಸ್ಗಳನ್ನು ಪಡೆದವರ ಪೈಕಿ ಮೂರರಿಂದ ಏಳು ತಿಂಗಳ ಬಳಿಕವೂ ಕೋವಿಡ್-19 ವಿರುದ್ಧ ಪ್ರತಿರೋಧದ ಶಕ್ತಿ ಉತ್ತಮವಾಗಿರುವ ವಿಚಾರವು 500ರಷ್ಟು ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ನಡೆಸಿರುವ ಅಧ್ಯಯದಲ್ಲಿ ತಿಳಿದುಬಂದಿದೆ. ಪುಣೆ ಮೂಲದ ಬಿಜೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಾಸ್ಸೋನ್ ಆಸ್ಪತ್ರೆಗಳು ಈ ಅಧ್ಯಯನವನ್ನು ಜಂಟಿಯಾಗಿ ನಡೆಸಿವೆ.
ಮೇಲ್ಕಂಡ ಕಾರಣದಿಂದಾಗಿ, ಸದ್ಯದ ಮಟ್ಟಿಗೆ ಬೂಸ್ಟರ್ ಡೋಸ್ಗಿಂತಲೂ ಎರಡನೇ ಲಸಿಕೆಯ ಕವರೇಜ್ ಅನ್ನು ಹೆಚ್ಚಿಸುವತ್ತ ಗಮನ ನೀಡಬೇಕಾದ ಅಗತ್ಯವಿದೆ ಎಂದು ಡಾ .ಮುರಳೀಧರ್ ಟಾಂಬೆ, ಬಿಜೆಎಂಸಿಯ ಸಾಮುದಾಯಿಕ ವೈದ್ಯಕೀಯ ವಿಭಾಗದ ಪ್ರೊಫೆಸರ್ ತಿಳಿಸಿದ್ದಾರೆ.
“ಕೋವಿಡ್ ಲಸಿಕೆಯ ಎರಡು ಡೋಸ್ಗಳ ನಡುವಿನ ಅವಧಿ ಹೆಚ್ಚಾದಷ್ಟೂ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದು ಕಂಡು ಬಂದರೂ ಸಹ, ಅಧ್ಯಯನದಲ್ಲಿ ಪಾಲ್ಗೊಂಡವರ ಪೈಕಿ, ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದು ಮೂರು ತಿಂಗಳಾದವರ ಪೈಕಿ 96.77% ಜನರಲ್ಲಿ ರೋಗನಿರೋಧಕ ಸಕಾರಾತ್ಮಕತೆ ಇದ್ದು, ನಾಲ್ಕು ತಿಂಗಳಾದವರ ಪೈಕಿ 100%ನಷ್ಟು ಜನರಿಗೆ ಈ ಶಕ್ತಿ ಇದ್ದರೆ, ಏಳು ತಿಂಗಳ ವೇಳೆಗೆ 91.88%ನಷ್ಟಿದೆ,” ಎಂದು ಟಾಂಬೆ ತಿಳಿಸಿದ್ದಾರೆ.
ಅಧ್ಯಯನಕ್ಕೆ ಒಳಪಟ್ಟ 558 ಸಿಬ್ಬಂದಿಯ ಪೈಕಿ 90% ನಷ್ಟು ಜನರಲ್ಲಿ ಕೋವಿಡ್ ವಿರುದ್ಧ ರೋಗ ನಿರೋಧಕ ಶಕ್ತಿ ಪ್ರಬಲವಾಗಿರುವುದು ತಿಳಿದುಬಂದಿದೆ. ಹಾಗಾಗಿ ಕೋವಿಶೀಲ್ಡ್ ಕೂಡ ಹೆಚ್ಚು ಪ್ರತಿರೋಧ ಶಕ್ತಿ ಹೊಂದಿದೆ ಎಂಬುದು ಸಾಬೀತಾಗಿದೆ.