ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ದೂರು ನೀಡಿದ ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಂ ಹೆಗ್ಡೆ
ಮಂಗಳೂರು: ಹಿಂದೂ ಸಂಘಟನೆಯ ಯುವಕರ ವಿರುದ್ದ ಸುಮೋಟೋ ಪ್ರಕರಣದ ನಂತರ ಪೋಸ್ಟ್ ಕಾರ್ಡ್ ನ ಮಹೇಶ್ ವಿಕ್ರಂ ಹೆಗ್ಡೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ರನ್ನು ಬಹಿರಂಗವಾಗಿ ಟೀಕಿಸಿದ್ದು, ನಂತರ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಪತ್ರಿಕಾಗೋಷ್ಠಿ ಕರೆದು ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರಾಜೀನಾಮೆ ಕೇಳಿದರೆ ಅದು ನೀವು ಕೊಟ್ಟಿರುವ ಭಿಕ್ಷೆ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬರೆದ ಮಾತ್ರಕ್ಕೆ ಸಂಘಟನೆ ಒಡೆಯುವುದಿಲ್ಲ ಎಂದು ಪೋಸ್ಟ್ ಕಾರ್ಡ್ ನ ಮಹೇಶ್ ವಿಕ್ರಮ್ ಹೆಗ್ಡೆ ವಿರುದ್ಧ ಗರಂ ಆದ ಬೆನ್ನಲ್ಲೇ ಹೆಗ್ಡೆ ನರೇಂದ್ರ ಮೋದಿಗೆ ದೂರು ನೀಡಿದ್ದಾರೆ.ಅಲ್ಲದೆ ಮಹೇಶ್ ವಿಕ್ರಂ ಹೆಗ್ಡೆ ಪರ ಸೋಷಿಯಲ್ ಮೀಡಿಯಾದಲ್ಲಿ ಹಲವರು ಬೆಂಬಲಿಸಿದ್ದಾರೆ.
ಮಹೇಶ್ ವಿಕ್ರಂ ಹೆಗ್ಡೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ದೂರಿನಲ್ಲಿ, ನಾನು ಕಳೆದ 7 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಬಿಟ್ಟು ದುಡಿದಿದ್ದೇನೆ, ನಾನು ನಿಮ್ಮ ಅತೀ ದೊಡ್ಡ ಅಭಿಮಾನಿ . ನಾನು ಹಿಂದುತ್ವ ವಿಷಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವರನ್ನು ಟೀಕಿಸಿದ್ದಕ್ಕೆ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ಕರೆದು ನನ್ನನ್ನು ಕಾಂಗ್ರೇಸ್ ಏಜೆಂಟ್ ಅಂತಿದ್ದರೆ ಎಂದು ಅಳಲು ತೋಡಿಕೊಂಡಿದ್ದಾರೆ. ನಾನು 3 ಲಕ್ಷ ಬಿಜೆಪಿ ಪರ ಪೋಸ್ಟ್ ಹಾಕಿ ಒಂದು ವಿರೋಧ ಹಾಕಿದ್ದಕ್ಕೆ ನನ್ನನ್ನು ವಿರೋಧಿಸಿದ್ರು.
ಅಂಟೋನಿಯ ಮೈನೋ ಹಾಗೂ ಕಾಂಗ್ರೇಸ್ ನನ್ನ ಕಾಲಿನ ದೂಳಿಗೆ ಸಮ ನಾನು ಯಾವತ್ತೂ ಬಿಜೆಪಿ ಕಾರ್ಯಕರ್ತ. ನೀವು ಇದನ್ನು ಗಮನಿಸಿ ನನಗೆ ಬೆಂಬಲಿಸಬೇಕಾಗಿ ಮೋದಿಗೆ ಟ್ವಿಟರ್ ಮೂಲಕ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದರ್ಶನ್ , ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಸೋಷಿಯಲ್ ಮೀಡಿಯಾದಲ್ಲಿ ದುರ್ಬಲ ರಾಜಾಧ್ಯಕ್ಷ ಎಂದು ಹೇಳಿಕೆ ಕೊಟ್ಟ ಕೂಡಲೇ ಅವರು ದುರ್ಬಲವಾಗುವುದಿಲ್ಲ.
ರಾಜಾಧ್ಯಕ್ಷ ಹುದ್ದೆ ಸಂಘಟನೆ ಅವರಿಗೆ ಕೊಟ್ಟಿರುವ ಜವಾಬ್ದಾರಿ. ಇದೆಲ್ಲ ಯಾರು ಪೇಮೆಂಟ್ ಕೊಡುತ್ತಾರೆ ಅವರಿಗೆ ಬರೆಯುವ ಸಂಸ್ಥೆಗಳು ಎಂದು ಪೋಸ್ಟ್ ಕಾರ್ಡ್‌ನ್ನು ಟೀಕಿಸಿ, ನೈಜ ಕಾರ್ಯಕರ್ತರು ಇದನ್ನು ಮಾಡಿಲ್ಲ ಎಂದರು.
ಕೆಲವರು ಸಂಘಟನೆಯಲ್ಲಿ ಪದವಿ ಅಥವ ಹುದ್ದೆ ಕೇಳಿ ಬರುತ್ತಾರೆ ಸಿಗದಿದ್ದಾಗ ಈ ರೀತಿ ಬರೆಯುತ್ತಾರೆ ಎಂದು ವಾಗ್ದಾಳಿ ನಡೆಸಿದ ಅವರು ಕೆಲವರು ಸೋಷಿಯಲ್ ಮೀಡಿಯಾದ ಮೂಲಕ ಎಂಪಿ, ಎಂಎಲ್ ಎ ಆಗಬಹುದು ಎಂದು ತಿಳಿದುಕೊಂಡಿದ್ದಾರೆ.ಇದು ಮೂರ್ಖತನದ ಪರಮಾವಧಿ. ನಮ್ಮ ಸಂಸದರಿಂದ ಸಹಾಯ ಪಡೆದವರೇ ಸಂಸದರ ವಿರುದ್ಧ ಬರೆದಿದ್ದಾರೆ ಎಂದರು.
ರಾಜ್ಯಾಧ್ಯಕ್ಷರ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸಹ ಶಹಬ್ಬಾಸ್ ಗಿರಿ ವ್ಯಕ್ತಪಡಿಸಿದ್ದಾರೆ. ಅವರು ಚುನಾವಣೆ ಎದುರಿಸಿ ಪಕ್ಷವನ್ನು ಗೆಲ್ಲಿಸಿ ಬಲಪಡಿಸಿದ್ದಾರೆ.
ಇದರ ಹಿಂದೆ ಅತೃಪ್ತ ಆತ್ಮ ಹಾಗೂ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಬಿಜೆಪಿ ಹಾಗೂ ಸಂಘಟನೆ ನಡುವೆ ಬಿರುಕು ಮೂಡಿಸಿ ಬಿಜೆಪಿಯ ಭದ್ರಕೋಟೆ ದ.ಕ ಜಿಲ್ಲೆಯನ್ನು ಒಡೆಯಬೇಕು ಎನ್ನುವ ಹುನ್ನಾರ ನಡೆಯುತ್ತಿದೆ.
ಸೋಷಿಯಲ್ ಮೀಡಿಯಾ ಮೂಲಕ ಹಿಂದೂ ಸಂಘಟನೆ ಕಟ್ಟಲು ಸಾಧ್ಯವಿಲ್ಲ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದ ಮಾತ್ರಕ್ಕೆ ಸಂಘಟನೆ ಒಡೆಯುವುದಿಲ್ಲ ಎಂದರು.
ಆ ನಂತರ ತನ್ನ ಲಕ್ಷಾಂತರ ಬೆಂಬಲಿಗರಿರುವ ಹಲವಾರು ಖಾತೆ ಮೂಲಕ ಜಿಲ್ಲಾಧ್ಯಕ್ಷ ಸುದರ್ಶನ್ ಹಾಗೂ ಇತರ ಬಿಜೆಪಿ ನಾಯಕರು ಕಾಂಗ್ರೇಸ್ ನಾಯಕರೊಂದಿಗೆ ಹೊಂದಿರುವ ವ್ಯವಹಾರದ ಬಗ್ಗೆ ಹೀಗೆಂದು ಬರೆದಿದ್ದಾರೆ.
ಇದು ಕೇವಲ ಒಂದು ಪ್ರಶ್ನೆಗೆ ನನಗೆ ಸಿಕ್ಕ ಬಿರುದು. ಹೌದು, ಕಳೆದ ಎರಡು ದಿನಗಳಿಂದ “ಕೆಲವರು” ನನ್ನ ಪ್ರಶ್ನೆಗೆ ಉತ್ತರಿಸಲಾಗದೆ ನೇರವಾಗಿ ನಾನು ಕಾಂಗ್ರೆಸ್ ಏಜೆಂಟ್ ಎಂಬಂತೆ ಮಾತನಾಡುತ್ತಿದ್ದಾರೆ.
ಕಳೆದ ಚುನಾವಣೆಯ ಸಂದರ್ಭದಲ್ಲಿ ನಾನು ಬಿಜೆಪಿ ಪರವಾಗಿ ಬರೆದಿದ್ದೆ ಮತ್ತು ಈಗ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸುತ್ತಿದ್ದೇನೆ ಎಂಬ ವಿಚಾರವಾಗಿ ಈ ಬಾರಿ ನಾನು ಕಾಂಗ್ರೆಸ್ ಏಜೆಂಟ್ ಆಗಿ ಕಂಡುಬರುತ್ತಿದ್ದೇನೆ (ಕೇವಲ ಬಕೆಟ್‌ಗಳ ಕಣ್ಣಿಗೆ ಮಾತ್ರ). ಇಂತಹ ಪೊಳ್ಳು ಪತ್ರಿಕಾಗೋಷ್ಠಿ ಅಥವಾ ಮಾತಿಗೆ ಯಾವತ್ತೂ ತಲೆಕೆಡಿಸಿಕೊಂಡವನು ನಾನಲ್ಲ. ಆದರೆ ಇದಕ್ಕೆ ಉತ್ತರ ಕೊಡದೆ ಕೂರುವವನೂ ನಾನಲ್ಲ. ನಾನು ಕೇಳಿದ್ದ ಪ್ರಶ್ನೆಗೆ ವಿಕ್ರಮ ತ್ರಿವಿಕ್ರಮ ಎಂದು ಕೆಲವರು ನನ್ನನ್ನು ಟೀಕಿಸಿದರೆ, ಕೆಲವರು ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷದ ಸಲಹೆಗಾರನಾಗಿ ಬರೆಯುತ್ತಿದ್ದೇನೆ ಅಥವಾ ಬೇರೆ ಪಕ್ಷಕ್ಕೆ ಸೇರಿ ಅವರ ಪರವಾಗಿ ಬರೆಯಲಿದ್ದೇನೆ ಎಂಬಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಹುಶಃ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರಿಗೆ ಗೊತ್ತೋ ಗೊತ್ತಿಲ್ವೋ…. ಅವರು ಎಲ್ಲೆಲ್ಲಿ ಕಾಂಗ್ರೆಸ್ ಜೊತೆ ಸೇರಿ “ವ್ಯವಹಾರ” ನಡೆಸುತ್ತಿದ್ದಾರೆ ಎಂಬುದು ನಮ್ಮವರಿಗೂ ಗೊತ್ತಿದೆ ಎಂದು..!
ಅದಿರಲಿ, ನಾನು ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಅಂದರೆ ನಮ್ಮ ಸಂಸದರ ಪರವಾಗಿ ಬರೆದಿದ್ದೇ ಪ್ರಚಾರ ಮಾಡಿದ್ದೇ ಎಂಬುದನ್ನು ಉಲ್ಲೇಖಿಸಿದವರು, ನಾನಿಂದು ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಿದ ಮಾತ್ರಕ್ಕೆ ನಾನು ಇನ್ಯಾವುದೋ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ನೇರವಾಗಿ ಹೇಳಿದರು. ಇದಕ್ಕೂ ನಾನು ಉತ್ತರ ನೀಡುತ್ತೇನೆ…
ಕಾಂಗ್ರೆಸಿಗರ ಜನ್ಮ ಜಾಲಾಡಿದ ನನಗೆ ಬಿಜೆಪಿಯಲ್ಲಿ ಅಧಿಕೃತವಾಗಿ ಹುದ್ದೆ ನೀಡುವ ಮಾತು ಬಂದಾಗಲೇ ನಾನದನ್ನು ನಿರಾಕರಿಸಿದವನು. ಅಷ್ಟೇ ಮಾತ್ರವಲ್ಲದೆ ಪಕ್ಷದ ಕೆಲಸಕ್ಕೆ ನಾನು ಯಾವತ್ತೂ ಹಣ ಪಡೆದವನಲ್ಲ. ಆದರೆ ನನ್ನ ಪ್ರಶ್ನೆಗೆ ಉತ್ತರ ನೀಡುವ ಭರದಲ್ಲಿ ಜಿಲ್ಲಾಧ್ಯಕ್ಷರು ನಾನು ಕಾಂಗ್ರೆಸ್ ಏಜೆಂಟ್ ಎಂದು ಬಿರುದು ನೀಡಿದರು.
ನಾನು ಏಜೆಂಟ್ ಹೌದು, ಆದರೆ ಹಿಂದುತ್ವದ ಪರವಾದ ಏಜೆಂಟ್…ಹಿಂದೂ ಕಾರ್ಯಕರ್ತರ ಪರವಾಗಿ ಕೆಲಸ ಮಾಡುವ ಏಜೆಂಟ್…ನಮ್ಮವರಿಗೆ ಸಮಸ್ಯೆ ಆದಾಗ ಸಮಾಜದ ಮುಂದೆ ನಿಂತು “ಭಿಕ್ಷಾಂದೇಹಿ” ಅಭಿಯಾನ ನಡೆಸಿ ಕಾರ್ಯಕರ್ತರ ಬೆನ್ನಿಗೆ ನಿಂತ ಏಜೆಂಟ್…
ನೀವು ಹೇಳಿದ ಮಾತ್ರಕ್ಕೆ ನಾನು ಬಿಜೆಪಿ ಮತ್ತು ಹಿಂದುತ್ವದ ಸಿದ್ಧಾಂತ ಬಿಟ್ಟು ಬೇರೆ ಪಕ್ಷಕ್ಕೆ ಅಂಟಿಕೊಳ್ಳುವನಲ್ಲ, ಯಾಕೆಂದರೆ ಇಲ್ಲೇ ಇದ್ದು ಇಲ್ಲಿನ ಕೆಲ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗ ಕಂಡುಕೊಳ್ಳುವವ, ನೆನಪಿರಲಿ..!
ಈಗ ಮುಖ್ಯವಾದ ವಿಚಾರಕ್ಕೆ ಬರೋಣ, ಚುನಾವಣೆಯಲ್ಲಿ ಬಿಜೆಪಿ ಪರವಾಗಿ ನಾನು ಕೆಲಸ ಮಾಡಿದ ಮಾತ್ರಕ್ಕೆ ನಾನು ಯಾರಿಂದಲೂ ನಯಾ ಪೈಸೆ ಪಡೆಯದೇ ಇದ್ದಿದ್ದರಿಂದಲೇ ಇಂದು ಒಬ್ಬ #ಕಾರ್ಯಕರ್ತನಾಗಿ ನಮ್ಮವರನ್ನು ಪ್ರಶ್ನಿಸುವ ತಾಕತ್ತು ಹೊಂದಿದ್ದೇನೆ. ನಿಮ್ಮಲ್ಲಿ ಆ ಅಂಶ ಇದ್ದರೆ ನನ್ನ ಮೂರೇ ಮೂರು ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನಿಸಿ…!
ಕಾರ್ಕಳ ತಾಲೂಕಿನಲ್ಲಿರುವ ಕ್ರಷರ್ ಬ್ಯುಸಿನೆಸ್ ಬಗ್ಗೆ ಅನೇಕರಿಗೆ ಗೊತ್ತಿರಬಹುದು ಮತ್ತು ಆ ಕ್ರಷರ್ ಬ್ಯುಸಿನೆಸ್ ಕಾಂಗ್ರೆಸ್‌ನ ಕೆಲವರಿಗೆ ಸೇರಿದ್ದು ಎಂಬುದು ಕೂಡ ಗೊತ್ತಿರಬಹುದು, ಆದರೆ ಆ ಬ್ಯುಸಿನೆಸ್ ನಲ್ಲಿ ಪಾಲುದಾರನಾಗಿ ಯಾರ ಕಣ್ಣಿಗೂ ಕಾಣದಂತೆ ಇರುವ ವ್ಯಕ್ತಿ ಯಾರೆಂಬುದು ಗೊತ್ತಿದೆಯೇ… ಇದಕ್ಕೆ ನಿಮ್ಮಲ್ಲಿ ಉತ್ತರ ಇದೆಯೇ..? ( ಇಂದು ಪತ್ರಿಕಾ ಗೋಷ್ಟಿ ನಡೆಸಿದವರು )
ವೇಣೂರಿನಲ್ಲಿ ನಡೆಯುತ್ತಿರುವ ಮರಳುಗಾರಿಕಲ್ಲಿ ಪಾಲುದಾರಿಕೆ ಯಾರದ್ದು ಮತ್ತು ಯಾರೊಂದಿಗೆ…?
ಕಣಚ್ಚೂರು ಮೋನುವಿನ ಮೆಡಿಕಲ್ ಪರವಾನಿಗಾಗಿ ದೆಹಲಿಗೆ ಹೋಗಿ, ರಾಜಕೀಯ ಪ್ರಭಾವದಿಂದ ಪಡೆದುಕೊಂಡ ಮಂಗಳೂರಿನ ಪ್ರಭಾವಿ ರಾಜಕಾರಣಿ ಯಾರು…?
ಯುಟಿ ಖಾದರ್ ಅವರ ತಮ್ಮ ನಡೆಸುತ್ತಿರುವ ವೈದ್ಯಕೀಯ ನರ್ಸಿಂಗ್ ಕಾಲೇಜಿನ ಪಾಲುದಾರರಾಗಿ ಇರುವ ಶಾಸಕ ಯಾರು…?
ಈ ಮೂರು ಪ್ರಶ್ನೆ ಮಾತ್ರ ಅಲ್ಲ, ಇಂತಹ ನೂರು ಪ್ರಶ್ನೆ ನಮ್ಮಲ್ಲಿದೆ. ಆದರೆ ಅದರ ಸಮಯ ಇನ್ನೂ ಬಂದಿಲ್ಲ.
ನಾವು ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಿರುವುದು ನಮ್ಮ ವೈಯಕ್ತಿಕ ಲಾಭಕ್ಕಾಗಿಯೂ ಅಲ್ಲ, ವೈಯಕ್ತಿಕ ದ್ವೇಷಕ್ಕಾಗಿಯೂ ಅಲ್ಲ, ನಮ್ಮವರ ಪರವಾಗಿ ಪ್ರಶ್ನಿಸಿದ್ದೇನೆ ಅಷ್ಟೇ. ಅಷ್ಟಕ್ಕೇ ಕಾಂಗ್ರೆಸ್ ಏಜೆಂಟ್ ಎಂಬ ಬಿರುದು ನೀಡಿದರೆ, ತಮ್ಮ ವ್ಯವಹಾರ ಎಲ್ಲವನ್ನೂ ಕಾಂಗ್ರೆಸ್‌ನವರ ಜೊತೆಯೇ ನಡೆಸುವ “ಕೆಲ ನಮ್ಮವರಿಗೆ” ಯಾವ ಬಿರುದು ನೀಡುತ್ತೀರಿ…?
ಪದವಿಯ ಆಸೆಯಿಂದ ಪ್ರಶ್ನಿಸುವ ಕೀಳುಮಟ್ಟದ ಯೋಚನೆ ನಮ್ಮಲ್ಲಿದ್ದರೆ, ಅದಾಗಲೇ ನಾವು ಒಂದು ಜವಾಬ್ದಾರಿ ವಹಿಸಿಕೊಂಡು ಮುಂಚೂಣಿಯಲ್ಲಿ ನಿಲ್ಲಬಹುದಿತ್ತು. ಆದರೆ ಆ ಯೋಚನೆ ನಮ್ಮಲ್ಲಿಲ್ಲ. ಅದೇ ರೀತಿ “ಸಂಘದ ಸ್ವಯಂಸೇವಕ” ಎಂಬ ತೃಪ್ತಿ ಇದೆ ಅಲ್ವಾ, ಅದಕ್ಕಿಂತ ದೊಡ್ಡ ಬಿರುದು ನನಗೆ ಬೇಕಿಲ್ಲ ಮತ್ತು ಅವಶ್ಯಕತೆ ಕೂಡ ಇಲ್ಲ…!
ಸಾಮಾಜಿಕ ಜಾಲತಾಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬ ನಿಮ್ಮ ಮಾತಿಗೆ ಬಹುಶಃ ಸಾಮಾಜಿಕ ಜಾಲತಾಣದಲ್ಲೇ ದೊಡ್ಡ ಮಟ್ಟದ ಉತ್ತರ ನೀಡಲಿದ್ದೇನೆ, ಕಾಯ್ತಾ ಇರಿ…!
ಸ್ವಯಂಸೇವಕ ??
ಮಹೇಶ್ ವಿಕ್ರಮ್ ಹೆಗ್ಡೆ
ಇದೀಗ ತೀವ್ರ ಅಸಮಾಧಾನಗೊಂಡಿರುವ ಹೆಗ್ಡೆ ನರೇಂದ್ರ ಮೋದಿಗೆ ದೂರು ನೀಡಿದ್ದಾರೆ.