ದಿವ್ಯಾಂಗ ಮಹಿಳೆಯ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಪ್ರಧಾನಿ ಮೋದಿ !! | ಕಾಶಿಯ ಆ ಫೋಟೋ ಇದೀಗ ಫುಲ್ ವೈರಲ್ | ಪ್ರಧಾನ ಸೇವಕನಿಗೆ ಮೆಚ್ಚುಗೆಯ ಸುರಿಮಳೆ
ಇತ್ತೀಚಿಗೆ ಕಾಶಿಯಲ್ಲಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ವಿಜೃಂಭಣೆಯಿಂದ ನೆರವೇರಿತ್ತು. ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದರು. ಆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂಗವಿಕಲೆಯೊಬ್ಬರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದ ಫೋಟೋ ಇದೀಗ ಭಾರೀ ವೈರಲ್ ಆಗಿದೆ.
ಪ್ರಧಾನಿಯವರನ್ನು ಭೇಟಿಯಾಗಲು ಬಂದಿದ್ದ ಶಿಖಾ ರಸ್ತೋಗಿ ಎಂಬ ಮಹಿಳೆಯ ಕಾಲಿಗೆ ಪ್ರಧಾನಿ ನಮಸ್ಕರಿಸಿದ್ದಾರೆ. ಡಿ.13 ರಂದು ಮೋದಿ ಕಾಶಿ ಪ್ರವಾಸದಲ್ಲಿದ್ದರು. ಆ ಸಮಯದಲ್ಲಿ ಮಹಿಳೆ ಅವರ ಭೇಟಿಗೆ ಬಂದಿದ್ದಾರೆ. ಪ್ರಧಾನಿಯವರನ್ನು ಕಂಡ ತಕ್ಷಣ ಅವರು ನಮಸ್ಕರಿಸಿದ್ದಾರೆ. ಆದರೆ ಮೋದಿ ಅವರನ್ನು ತಡೆದು ತಾವೇ ಬಗ್ಗಿ ನಮಸ್ಕಾರ ಮಾಡಿದ್ದಾರೆ. ನಂತರ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಶಿಖಾ ಜತೆಗೆ ಬಂದಿದ್ದ ಅವರ ಸಹೋದರ ವಿಶಾಲ್ ರಸ್ತೋಗಿ ಈ ಅಚಾನಕ್ ಬೆಳವಣಿಗೆಯಿಂದ ಅಚ್ಚರಿಗೊಂಡಿದ್ದಾರೆ. ಶಿಖಾ ಹುಟ್ಟಿನಿಂದಲೇ ಅಂಗವಿಕಲಳು. ನನ್ನ ಸಹೋದರಿಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಮನೆಯಲ್ಲಿ ಅಂಗವಿಕಲರು ಇದ್ದರೆ ಅವರನ್ನೂ ನಿಮ್ಮಂತೆಯೇ ನೋಡಿ, ಅವರನ್ನು ಕಡೆಗಣಿಸಬೇಡಿ. ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂದು ಖುದ್ದು ಪ್ರಧಾನಿಯವರೇ ತೋರಿಸಿಕೊಟ್ಟಿದ್ದಾರೆ ಎಂದು ಭಾವುಕರಾದರು.
ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಈ ಚಿತ್ರವನ್ನು ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ. ಇದು ಎಲ್ಲಾ ಮಹಿಳಾ ಶಕ್ತಿಗೆ ದೊಡ್ಡ ಗೌರವವಾಗಿದೆ. ನಾವೆಲ್ಲರೂ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಅವರು ಹೇಳಿದ್ದಾರೆ.
ಮಹಿಳೆ ಕಾಲಿಗೆ ನಮಸ್ಕರಿಸಿದ ಮೋದಿ ಅವರ ಈ ಫೋಟೋವನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.