ಬಲು ದುಬಾರಿಯಪ್ಪ ಮನೋಹರಿ ಗೋಲ್ಡ್ ಟೀ ಪುಡಿ !! | 1 ಕೆ.ಜಿ ಚಹಾ ಪುಡಿ ಬೆಲೆ ಕೇಳಿದರೆ ನೀವು ಬೆಕ್ಕಸ ಬೆರಗಾಗುವುದು ಪಕ್ಕಾ
ಚುಮುಚುಮು ಮುಂಜಾನೆಯ ಚಳಿಗೆ ಒಂದು ಕಪ್ ಟೀ ಸಿಕ್ಕರೆ ಸ್ವರ್ಗ ಸಿಕ್ಕಂತಾಗುತ್ತದೆ. ಅದ್ರಲ್ಲೂ ಚಹಾ ಭಾರತದ ಮಂದಿಗೆ ಕೇವಲ ಪಾನೀಯವಲ್ಲ. ಅದೊಂದು ಉತ್ಸಾಹ. ಭರವಸೆ. ಒಂದು ಸಿಪ್ ಟೀಗೆ ಸಂಪೂರ್ಣ ಒತ್ತಡವನ್ನು ಶಮನ ಮಾಡುವಷ್ಟು ಶಕ್ತಿ ಇರುತ್ತದೆ. ಭಾರತಕ್ಕೂ, ಟೀಗೂ ಅಷ್ಟೊಂದು ಅವಿನಾಭಾವ ಸಂಬಂಧ. ಟೀಯ ಸುವಾಸನೆ, ರುಚಿ, ಸ್ವಾದದ ಮುಂದೆ ಯಾವ ಅನುಭವವೂ ದಕ್ಕದು. ಹೀಗಾಗಿ ಭಾರತೀಯರು ಹೆಚ್ಚು ಸೇವನೆ ಮಾಡುವ ಪಾನೀಯಗಳ ಸಾಲಿನಲ್ಲಿ ಚಹಾಗೆ ಅಗ್ರಸ್ಥಾನವಿದೆ. ಜೊತೆಗೆ ಭಾರತದಲ್ಲಿ ಹೆಚ್ಚು ಬೆಳೆಯುವ ವಾಣಿಜ್ಯ ಬೆಳೆಗಳಲ್ಲಿ ಸಹ ಚಹಾ ಒಂದು.
ಹಾಗೆಯೇ ಭಾರತದಲ್ಲಿ ಒಂದು ಕಪ್ ಟೀ ಇಲ್ಲದೆ ಬೆಳಗ್ಗೆ, ಸಂಜೆ ಆಗುವುದೇ ಇಲ್ಲ. ಅಷ್ಟರಮಟ್ಟಿಗೆ ಭಾರತೀಯರು ಟೀಯನ್ನು ನೆಚ್ಚಿಕೊಂಡಿದ್ದಾರೆ. ಹೀಗಾಗಿಯೇ ದೇಶದ ಆಯಾಯ ಪ್ರದೇಶಗಳಲ್ಲಿ ವಿವಿಧ ರೀತಿಯ ಚಹಾಗಳು ಲಭ್ಯವಿದೆ. ಅದರಲ್ಲೂ ಚಳಿಗಾಲ ಬಂದರೆ ಸಾಕು ಮಸಾಲಯುಕ್ತ ಟೀಗಳನ್ನು ಸವಿಯುವುದೇ ಚೆಂದ. ಗ್ರೀನ್ ಟೀ, ಜಿಂಜರ್ ಟೀ ಮೊದಲಾದ ಮಸಾಲೆ ಟೀಗಳು ಚಳಿಯ ಸಮಯದಲ್ಲಿ ಮೈಯನ್ನು ಬೆಚ್ಚಗಾಗಿಡುವುದಲ್ಲದೆ ಆರೋಗ್ಯವೂ ಹದಗೆಡದಂತೆ ಕಾಪಾಡುತ್ತದೆ.
ಇಂತಹ 1 ಕೆ.ಜಿ ಟೀ ಪೌಡರ್ ಎಷ್ಟು ಬೆಲೆ ಇರಬಹುದು?? ಅಬ್ಬಬ್ಬಾ ಎಂದರೆ 500 ರೂ.ವರೆಗೆ ಇರಬಹುದು. ಆದರೆ
ಅಸ್ಸಾಂ ಮೂಲದ ಟೀ ಎಸ್ಟೇಟ್‌ನಲ್ಲಿ ಬೆಳೆದ 1 ಕೆ.ಜಿ ಸಾಂಪ್ರದಾಯಿಕ ಗೋಲ್ಡನ್ ಟಿಪ್ ಟೀ ಪುಡಿಗೆ ಬರೋಬ್ಬರಿ 99,999 ರೂ. !!!!
ಹೌದು, ಮನೋಹರಿ ಗೋಲ್ಡ್ ಟೀ ಪುಡಿ ಈ ವರ್ಷ 99,999 ರೂ.ಗೆ ಹರಾಜಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಟೀ ಪುಡಿಯಾಗಿದೆ. ಕಳೆದ ವರ್ಷ ಮನೋಹರಿ ಗೋಲ್ಡ್ ಟೀ ಪುಡಿ 75,000 ರೂ.ಗೆ ಮಾರಾಟವಾಗಿತ್ತು. ಆದರೆ ಈ ವರ್ಷ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದುಕೊಂಡು ಲಕ್ಷದತ್ತ ದಾಪುಗಾಲಿಟ್ಟಿದೆ.
ಗುವಾಹಟಿ ಮೂಲದ ಸಗಟು ವ್ಯಾಪಾರಿ ಸೌರಭ್ ಟೀ ಟ್ರೇಡರ್ಸ್, ಮನೋಹರಿ ಟೀ ಎಸ್ಟೇಟ್‌ನಲ್ಲಿ ಬೆಳೆದ ವಿಶೇಷ ಟೀ ಬ್ರ್ಯಾಂಡ್ ನ ಟೀ ಪುಡಿಯನ್ನು ಖರೀದಿಸಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈ ವಿಶೇಷ ತಳಿಯನ್ನು 2018 ರಿಂದ ಉತ್ಪಾದನೆ ಮಾಡಲಾಗುತ್ತಿದೆ. ಟೀ ಎಲೆಗಳ ಬದಲಾಗಿ ಟೀ ಮೊಗ್ಗುಗಳಿಂದ ಮನೋಹರಿ ಗೋಲ್ಡ್ ಟೀ ಪುಡಿಯನ್ನು ತಯಾರಿಸುತ್ತಾರೆ. ಈ ಪ್ರಕ್ರಿಯೆಯು ಬಹಳ ಕಷ್ಟಕರವಾಗಿರುತ್ತದೆ.
ಈ ಬಗ್ಗೆ ಮನೋಹರಿ ಟೀ ಎಸ್ಟೇಟ್‌ನ ಮಾಲೀಕ ರಾಜನ್ ಲೋಹಿಯಾ ಮಾತನಾಡಿ, ಟೀ ಉತ್ಪಾದನೆಗೆ ಅಸ್ಸಾಂನ ಮಣ್ಣು ಮತ್ತು ಹವಾಮಾನ ಹೆಚ್ಚು ಪೂರಕವಾಗಿದೆ. ಗುಣಮಟ್ಟದ ಟೀ ಪುಡಿಗಳನ್ನು ಗ್ರಾಹಕರಿಗೆ ನೀಡಲು ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತೇವೆ. ಇದರಲ್ಲಿ ನಾವು ಎಂದಿಗೂ ರಾಜಿ ಆಗುವುದಿಲ್ಲ. ಮತ್ತೊಮ್ಮೆ ದಾಖಲೆಯಲ್ಲಿ ಟೀ ಪುಡಿ ಮಾರಾಟವಾಗುವ ಮೂಲಕ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.
ಮನೋಹರಿ ಟೀ ಎಸ್ಟೇಟ್ 1,000 ಎಕರೆ ಪ್ರದೇಶದಲ್ಲಿದ್ದು, ಸುಮಾರು 600 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 2018ರಲ್ಲಿ ಮನೋಹರಿ ಬ್ರಾಂಡ್‌ನ 1 ಕೆ.ಜಿ ಟೀ ಪುಡಿ 39,000 ರೂ.ಗೆ ಸೌರಭ್ ಟೀ ಟ್ರೇಡರ್ಸ್ ಖರೀದಿಸಿತ್ತು. 2019ರಲ್ಲಿ ಇದೇ ಕಂಪನಿ 50,000 ರೂ. ಬೆಲೆಗೆ ಖರೀದಿಸಿತ್ತು. ಆದರೆ 2020ರಲ್ಲಿ 1 ಕೆ.ಜಿ ಟೀ ಪುಡಿಯನ್ನು 75,000 ರೂ.ಗೆ ವಿಷ್ಣು ಟೀ ಕಂಪನಿ ಹರಾಜಿಲ್ಲಿ ಪಡೆದುಕೊಂಡಿತ್ತು.