ನಟ ಸೋನು ಸೂದ್ ರಿಂದ ರೈಫಲ್ ಉಡುಗೊರೆ ಪಡೆದಿದ್ದ ನ್ಯಾಷನಲ್ ಶೂಟರ್ ಕೋನಿಕಾ ಲಾಯಕ್ ಆತ್ಮಹತ್ಯೆ | ಈವರೆಗೆ 4 ಶೂಟರ್ ಗಳ ಸುಯಿಸೈಡ್ ಸೃಷ್ಟಿಸಿದೆ ಆತಂಕ !
ಕೋಲ್ಕತ್ತಾ: ನಟ ಸೋನು ಸೂದ್‌ರಿಂದ ರೈಫಲ್ ಉಡುಗೊರೆಯಾಗಿ ಪಡೆದಿದ್ದ ರಾಷ್ಟೀಯ ಮಟ್ಟದ ಶೂಟರ್ ಕೋನಿಕಾ ಲಾಯಕ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಶೂಟರ್ ಕೋನಿಕಾ ಲಾಯಕ್ ಅವರು ಮಾರ್ಚ್‌ನಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರಿಂದ ಜರ್ಮನ್ ರೈಫಲ್ ಪಡೆದಿದ್ದರು. ಆಕೆ ನಿನ್ನೆ ಗುರುವಾರ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ, ಶೂಟಿಂಗ್ ಕ್ಷೇತ್ರದಲ್ಲಿ ಇಲ್ಲಿ ತನಕ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಆತಂಕ ಮೂಡಿಸಿದೆ.
ಕೋನಿಕಾ ಅವರು ಕೋಲ್ಕತ್ತಾದಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರು, ಒಲಿಂಪಿಯನ್, ಅರ್ಜುನ ಪ್ರಶಸ್ತಿ ವಿಜೇತ ಜಾಯ್ ದೀಪ್ ಕರ್ಮಾಕರ್ ಅವರು ತರಬೇತಿ ನೀಡುತ್ತಿದ್ದರು. ಗುರುವಾರದಂದು ಕೋನಿಕಾ ತಮ್ಮ ಹಾಸ್ಟೆಲ್ ರೂಮಿನಲ್ಲಿ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ಆಕೆ ಕಳೆದ 10 ದಿನಗಳಿಂದ ಕೋನಿಕಾ ಸರಿಯಾಗಿ ತರಬೇತಿಗೆ ಬರುತ್ತಿರಲಿಲ್ಲ ಹಾಗೂ ಯಾವುದೋ ಕಾರಣಕ್ಕೆ ತುಂಬಾ ವ್ಯಥೆಪಡುತ್ತಿದ್ದರು ಎಂದು ತರಬೇತುದಾರ ಜಾಯ್ ದೀಪ್ ಪ್ರತಿಕ್ರಿಯಿಸಿದ್ದಾರೆ. ಪ್ರಸಕ್ತ ಸಾಲಿನ ರಾಷ್ಟೀಯ ಮಟ್ಟದ ಶೂಟಿಂಗ್ ಸ್ಪರ್ಧೆಗೂ ಆಕೆ ಆಯ್ಕೆಯಾಗಲು ವಿಫಲಳಾಗಿದ್ದಳು, ಗುರಿ ವ್ಯತ್ಯಾಸದಲ್ಲಿ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ, ಇದರಿಂದ ಆಕೆ ತೀವ್ರವಾಗಿ ನೊಂದುಕೊಂಡಿದ್ದಳು, ಜಿವಿ ಮಾಲ್ವಾಂಕರ್ ಚಾಂಪಿಯನ್ ಶಿಪ್ ನಲ್ಲೂ ಆಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ ಎಂದು ಜಾಯ್ ದೀಪ್ ಹೇಳಿದರು.
ಮುಂದಿನ ವರ್ಷ ಫೆಬ್ರವರಿಯಲ್ಲಿ ಕೋನಿಕಾ ಮದುವೆಯಾಗಲು ಮುಂದಾಗಿದ್ದರು, ಈ ಬಗ್ಗೆ ಆಕೆಗೆ ಖುಷಿಯಿತ್ತು. ಆದರೆ, ಇಂಥ ನಿರ್ಧಾರ ಕೈಗೊಂಡಿದ್ದು ಏಕೆ ಎಂಬುದು ತಿಳಿಯುತ್ತಿಲ್ಲ ಎಂದಿದ್ದಾರೆ.
ಆಕೆ ಹತ್ತು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಕೋನಿಕಾ ಹಳೆ ರೈಫಲ್ ಬಳಸುತ್ತಿದ್ದಾರೆ, ಪ್ರತಿಭಾವಂತರಿಗೆ ನೆರವು ಬೇಕು ಎಂದು ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋ ನೋಡಿದ್ದ ಸೋನು ಸೂದ್ ಅವರು ಹೊಚ್ಚ ಹೊಸ ಮಾದರಿಯ ಜರ್ಮನಿ ರೈಫಲ್ ವೊಂದನ್ನು ಕೋನಿಕಾಗೆ ಗಿಫ್ಟ್ ಮಾಡಿದ್ದರು.
ಶೂಟಿಂಗ್ ಕ್ಷೇತ್ರದಲ್ಲಿ ಇದು ನಾಲ್ಕನೇ ಸಾವು, ಪಿಸ್ತೂಲ್ ಶೂಟರ್ ಖುಷ್ ಸೀರತ್ ಕೌರ್ ಸಂಧು ಇತ್ತೀಚೆಗೆ ರಾಷ್ಟ್ರೀಯ ಆಯ್ಕೆ ಟ್ರಯಲ್ ನಲ್ಲಿ ಕಡಿಮೆ ಅಂಕ ಗಳಿಸಿದ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು. ರಾಜ್ಯ ಮಟ್ಟದ ಶೂಟರ್ ಹುನಾರ್ ದೀಪ್ ಸಿಂಗ್ ಸೋಹಲ್, ಮೊಹಾಲಿಯ ನಮನ್ ವೀರ್ ಸಿಂಗ್ ಬ್ರಾರ್ ಕೂಡಾ ಕ್ರೀಡೆಯಲ್ಲಿ ವೈಫಲ್ಯ ಹೊಂದಿದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದರು.