‘ರೇಪ್ ಅನಿವಾರ್ಯವಾದರೆ ಹಾಗೆಯೇ ಸುಮ್ಮನೆ ಮಲಗಿ ಎಂಜಾಯ್ ಮಾಡಬೇಕು’ | ಸದನದಲ್ಲಿ ಮಾಜೀ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ !

ಬೆಳಗಾವಿ : ನಿನ್ನೆ ಬೆಳಗಾವಿಯ ಸದನ ಅಸಹ್ಯದ ಮಾತೊಂದಕ್ಕೆ ಸಾಕ್ಷಿ ಆಗಿತ್ತು. ಸದನದಲ್ಲಿ ಆರೋಪ-ಪ್ರತ್ಯಾರೋಪ ಇರುತ್ತದೆ. ಕಾಲೆಳೆಯುತ್ತಾರೆ. ಕೊಂಚ ತಮಾಷೆ ಇರುತ್ತದೆ. ಇದೆಲ್ಲದಕ್ಕೂ ಒಂದು ಮಿತಿ ಇರುತ್ತದೆ. ಯಾವುದೂ ಔಚಿತ್ಯದ ಗಡಿ ದಾಟಿ ಹೋಗಬಾರದು. ಸಂವೇದನೆ ಇಲ್ಲದೆ ಮಾತನಾಡಿದರೆ ಆಗ ಇಂಥಹಾ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕಾಂಗ್ರೆಸ್ ನಾಯಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತೆ ನಾಲಿಗೆ ಕೊಳಕು ಮಾಡ್ಕೊಂಡಿದ್ದಾರೆ. ಮಾತನಾಡುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಬಾರಿ ಸಭ್ಯ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಅದರ ಎಂಜಲು ತಾಕಿದೆ. ಕಾರಣ ಕಾಗೇರಿಯವರು ರಮೇಶ್ ಕುಮಾರ್ ರವರ ಕೊಳಕು ಮಾತಿಗೆ ನಕ್ಕಿದ್ದು !!

ಅತಿವೃಷ್ಟಿ ಹಾನಿ ಸಂಬಂಧ ನಿಯಮ 69 ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯರು ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ಸ್ಪೀಕರ್ ವಿಶ್ವೇಶ್ವರ ಕಾಗೇರಿ ಅವರಲ್ಲಿ ಮನವಿ ಮಾಡಿದರು. ಆಗ ಕಾಗೇರಿ ಏನು ಮಾಡುವುದು ಎಲ್ಲ ತೀರ್ಮಾನ ನೀವೇ ತೆಗೆದುಕೊಳ್ಳುತ್ತೀರಿ. ಅಲ್ಲವೇ ರಮೇಶ್ ಕುಮಾರ್ ಅವರೇ ಎಂದಾಗ ರಮೇಶ್ ಕುಮಾರ್ ಆಡಿದ ಮಾತು ಹೀಗಿತ್ತು.

‘ಅತ್ಯಾಚಾರ ನಡೆಯುತ್ತಿದ್ದಾಗ ಅದನ್ನು ತಡೆಯಲು ಸಾಧ್ಯವಿಲ್ಲ ಎಂದಾಗ ಸುಮ್ಮನೆ ಮಲಗಿ ಎಂಜಾಯ್ ಮಾಡಬೇಕು’ ಎಂಬರ್ಥದ ಇಂಗ್ಲಿಷ್ (English) ಸೇಯಿಂಗ್ ರಮೇಶ್ ಕುಮಾರ್ ಅವರ ಬಾಯಿಂದ ಬಂತು.
ಒಂದು ಮಾತಿದೆ…. ವೆನ್ ರೇಪ್ ಈಸ್ ಇನ್​ಎವಿಟಬಲ್ ಲೈ ಡೌನ್ ಅಂಡ್ ಎಂಜಾಯ್ ಇಟ್ (When Rape is inevitable, lie down and enjoy it- ಯಾವಾಗ ರೇಪ್ ಅನಿವಾರ್ಯ ಎಂಬಂತಾದಾಗ ಮಲಗಿ ಆನಂದಿಸಿಬಿಡಬೇಕು ಎಂದು ಹೇಳಿದರು. ಈ ಮಾತು ಹೇಳುವಾಗ ಕಾಗೇರಿ ಅವರು ನಗುತ್ತಿದ್ದರು.

ವಿಧಾನಸಭೆ ಕಲಾಪದ ಇಂಥದ್ದೊಂದು ಘಟನೆಗೆ ಸಾಕ್ಷಿಯಾಗಿದೆ. ಸಭಾಪತಿಗಳ ಪರಿಸ್ಥಿತಿಯ ಕುರಿತಾಗಿ ಹೇಳಿಕೆ ನೀಡುವ ಭರದಲ್ಲಿ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಆಡಿದ ಮಾತು ಎಂಥವರನ್ನು ಕೂಡಾ ಕ್ಷಣ ಕೆರಳಿಸುವಂತೆ ಮಾಡಿದೆ. ಇದೀಗ ರಾಷ್ಟ್ರೀಯ ಮಾಧ್ಯಮಗಳು ಕೂಡಾ ಈ ವಿಚಾರವನ್ನು ದೊಡ್ಡ ಮಟ್ಟದ ಸುದ್ದಿ ಮಾಡಿವೆ.

Leave A Reply

Your email address will not be published.