ರಾಜ್ಯ ಸರ್ಕಾರದ ಖಜಾನೆಗೆ ದೊಡ್ಡ ಪೆಟ್ಟು ನೀಡಿದೆ ಕೋವಿಡ್-19 | ಶೇ. 23 ರಷ್ಟು ಸಾಲ ಹೊರಿಸಿದ ಕೊರೋನಾ !!
ಕೊರೋನಾ ಎಂಬ ಮಹಾಮಾರಿ ದೇಶದಲ್ಲಿ ವಕ್ಕರಿಸಿ ಎರಡು ವರ್ಷ ಸಮೀಪಿಸುತ್ತಿದೆ. ಇನ್ನು ಕೂಡ ದೇಶದಲ್ಲಿ ಸಂಪೂರ್ಣವಾಗಿ ಇದರ ನಿರ್ಮೂಲನೆ ಇನ್ನೂ ಆಗಿಲ್ಲ. ಸದ್ಯಕ್ಕಂತೂ ಆ ರೀತಿಯ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
ಕೊರೋನಾ ಬದುಕಿನ ಪಾಠ ಕಲಿಸಿದೆ ಎಂದು ಕೆಲವರು ಬೀಗುತ್ತಿದ್ದರೆ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪೆಟ್ಟು ಕೊಟ್ಟಿರುವುದು ಮತ್ತಷ್ಟು ಆತಂಕ ತಂದಿರಿಸಿದೆ. ಎರಡು ವರ್ಷದಿಂದ ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಲ ಶೇ.23 ಸಾಲದ ಹೊರೆ ಹೆಚ್ಚಾಗಿದೆ ಎಂದು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.
2020-21ನೇ ಸಾಲಿನ ಆರ್ಥಿಕ ಹಾಗೂ ವಿನಿಯೋಗ ಖಾತೆ ವರದಿ ಪ್ರಕಾರ, ಕರ್ನಾಟಕದಲ್ಲಿ 14,535 ಕೋಟಿ ರೂ. ತೆರಿಗೆ ಖೋತಾ ಆಗಿದೆ. ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ಮಂಡಿಸಿದ ಮಹಾ ಲೆಕ್ಕಪರಿಶೋಧಕರ ವರದಿ (ಸಿಎಜಿ)ಯಲ್ಲಿ ಈ ಅಂಶ ಬಯಲಾಗಿದೆ.
ಕೋವಿಡ್ ಕಾರಣದಿಂದ ರಾಜ್ಯ ಸರ್ಕಾರದ ಸಾಲ ಶೇ.23 ಹೆಚ್ಚಳವಾಗಿದೆ. ಈ ಹಿಂದೆ 3.19 ಲಕ್ಷ ಕೋಟಿ ರೂ. ಇದ್ದ ಸಾಲದ ಮೊತ್ತ ಇದೀಗ 3.97 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ ಒಟ್ಟು 78 ಸಾವಿರ ಕೋಟಿ ರೂ. ಸಾಲ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ರಾಜ್ಯ ಸರ್ಕಾರ ಕಟ್ಟುವ ಬಡ್ಡಿ ಪ್ರಮಾಣವೂ ಹೆಚ್ಚಾಗಿದೆ. ಪ್ರತಿ ವರ್ಷ 22,666 ಕೋಟಿ ರೂ. ಅಂದರೆ ಶೇ.14 ಆದಾಯವನ್ನು ಬಡ್ಡಿಗೆ ಪಾವತಿಸಲಾಗುತ್ತಿದೆ.
ಕೇಂದ್ರಕ್ಕೆ ಹೆಚ್ಚುವರಿ ಪಾವತಿ: ಉಳಿತಾಯ ಎನ್ನುವ ವಿಭಾಗದಲ್ಲಿ ರಾಜ್ಯ ಸರ್ಕಾರ ನೀಡಿರುವ ವರದಿಗಳು ಭಿನ್ನವಾಗಿದ್ದು, ಕೇಂದ್ರ ಸರ್ಕಾರಕ್ಕೂ 68 ಕೋಟಿ ರೂ. ಹೆಚ್ಚುವರಿ ಪಾವತಿಯಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಿದೆ. ಕಳೆದ ಐದು ವರ್ಷದಿಂದ ನೀರಾವರಿ ಇಲಾಖೆಗೆ ಸಂಬಂಧಿಸಿದ 13 ಯೋಜನೆಗಳು, 41 ರಸ್ತೆ, 3 ಸೇತುವೆ ಹಾಗೂ ಒಂದು ಯೋಜನೆ ಪೂರ್ಣಗೊಂಡಿಲ್ಲ ಎನ್ನುವ ವಿಷಯವನ್ನು ವರದಿಯಲ್ಲಿ ಹೇಳಲಾಗಿದೆ.