ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪನೆ ಮಾಡುವಂತಿಲ್ಲ !! | “ಪ್ರತಿಷ್ಠಾಪಿಸಿದ ಪ್ರತಿಮೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ” ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್

Share the Article

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪನೆ ಕುರಿತು ಹೈಕೋರ್ಟ್ ತನ್ನ ಮಹತ್ವದ ತೀರ್ಪು ನೀಡಿದೆ. ‘ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿದ ಪ್ರತಿಮೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ, ಹೈಕೋರ್ಟ್ ಮೌಖಿಕವಾದ ಖಡಕ್‌ ಸೂಚನೆ ನೀಡಿದೆ.

‘ಸಾರ್ವಜನಿಕ ಪ್ರದೇಶದಲ್ಲಿ ಪ್ರತಿಮೆ ಸ್ಥಾಪನೆ ಮಾಡುವುದಕ್ಕೆ ನಿರ್ಬಂಧವಿದೆ. ಅದು ದೇವರ ಮೂರ್ತಿಯಾಗಲಿ ಅಥವಾ ಮಹಾನ್ ವ್ಯಕ್ತಿಯ ಪ್ರತಿಮೆಯೇ ಆಗಲಿ ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಬೇಕಾದರೆ ಸ್ವಂತ ಜಾಗದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಿ ಹಾಗೂ ಆರಾಧಿಸಲಿ. ಅದಕ್ಕೆ ನ್ಯಾಯಾಲಯದ ಆಕ್ಷೇಪವಿಲ್ಲ’ ಎಂದು ಕಟು ಮಾತಿನಲ್ಲಿ ತಿಳಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ ನಿಲ್ದಾಣದಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡಿರುವುದನ್ನು ಪ್ರಶ್ನಿಸಿ ಕುವೆಂಪು ಒಕ್ಕಲಿಗರ ಸಂಘ ಮತ್ತು ಬಿದಲೂರು ಗ್ರಾಮಸ್ಥರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ವಾಲ್ಮೀಕಿ ನಾಯಕರ ಸಂಘವು ಬಿದಲೂರು ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ ಅನಧಿಕೃತವಾಗಿ ಬಸ್ ನಿಲ್ದಾಣದಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸಿದೆ. ಇದು ಸಾರ್ವಜನಿಕ ಪ್ರದೇಶದಲ್ಲಿದ್ದು, ಪ್ರತಿಮೆಯನ್ನು ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು.

‘ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಪ್ರತಿಮೆ ತೆರವುಗೊಳಿಸದೆ ಸರ್ಕಾರ ಏಕೆ ಸುಮ್ಮನಿದೆ. ಸಾರ್ವಜನಿಕ ಸ್ಥಳದಲ್ಲಿನ ಪ್ರತಿಮೆಯಿಂದ ಜನ, ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಇಂತಹ ಪ್ರಕರಣಗಳಿಗೆ ಅಂತ್ಯ ಕಾಣಿಸಬೇಕು’ ಎಂದು ಹೇಳಿದೆ.

Leave A Reply