ಮೊಟ್ಟೆ ತಿನ್ನದ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ |ಬಾಳೆಹಣ್ಣಿನಲ್ಲಿ ಮೊಟ್ಟೆಯಷ್ಟು ಪೌಷ್ಠಿಕಾಂಶ ಇಲ್ಲದ ಕಾರಣದಿಂದ ಬಾಳೆಹಣ್ಣಿನ ಜೊತೆ ಶೇಂಗಾಚಿಕ್ಕಿ ನೀಡಲು ಸರ್ಕಾರ ನಿರ್ಧಾರ

ಬೆಂಗಳೂರು : ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವ ಯೋಜನೆಗೆ ವಿವಿಧ ಮಠಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಈ ಯೋಜನೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು.ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡುವ ತೀರ್ಮಾನಕ್ಕೆ ಬಂದಿತ್ತು. ಆದರೆ, ಬಾಳೆಹಣ್ಣಿನಲ್ಲಿ ಮೊಟ್ಟೆಯಷ್ಟು ಪೌಷ್ಠಿಕಾಂಶ ಇಲ್ಲದ ಕಾರಣದಿಂದ ಬಾಳೆಹಣ್ಣಿನ ಜೊತೆಗೆ ಶೇಂಗಾ ಚಿಕ್ಕಿ ನೀಡಲು ಸರ್ಕಾರ ನಿರ್ಧರಿಸಿದೆ.

ಕಲ್ಯಾಣ ಕರ್ನಾಟಕ ಭಾಗದ 1-8 ನೇ ತರಗತಿ ಸರ್ಕಾರಿ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದ್ದು ಕೂಡಲೇ ಮೊಟ್ಟೆ ವಿತರಣೆ ಆದೇಶ ವಾಪಸ್‌ ಪಡೆಯಬೇಕು ಎಂದು ಪ್ರತಿಭಟಿಸಿದ್ದರು.ಈ ಹಿನ್ನೆಲೆ ಮೊಟ್ಟೆ ಸೇವಿಸಿದ ಮಕ್ಕಳಿಗೆ ಬಾಳೆಹಣ್ಣು ವಿತರಿಸುವುದಾಗಿ ಸರ್ಕಾರ ತಿಳಿಸಿತ್ತು. ಇದೀಗ ಮೊಟ್ಟೆ ಸೇವಿಸಿದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಹಾಗೂ ಶೇಂಗಾಚಿಕ್ಕಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಮೊಟ್ಟೆ ತಿನ್ನಲು ನಿರಾಕರಿಸಿದ ಮಕ್ಕಳಿಗೆ ಬಾಳೆಹಣ್ಣಿನ ಜೊತೆ ಶೇಂಗಾಚಿಕ್ಕಿ ನೀಡಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿರುವ ಹಿನ್ನೆಲೆ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.

ಇತ್ತೀಚೆಗೆ ಶಾಲೆಗಳಲ್ಲಿ ಮೊಟ್ಟೆ ನೀಡುವ ವಿಚಾರಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದರು. ”ಮೊಟ್ಟೆ ಪೌಷ್ಟಿಕ ಆಹಾರವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಹಾಗಾಗಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಮೊಟ್ಟೆ ನೀಡುತ್ತಿದೆ” ಎಂದು ಅವರು ಹೇಳಿದ್ದಾರೆ. ಆಹಾರ ಪದ್ಧತಿ ಅವರವರ ಇಷ್ಟ , ಕೆಲವರು ಹಾಲು ಮೊಸರು ತೆಗೆದುಕೊಳ್ಳುವುದಿಲ್ಲ. ಇನ್ನೂ ಕೆಲವರು ಮೊಟ್ಟೆಯನ್ನು ಮಾತ್ರ ತಿನ್ನುತ್ತಾರೆ. ಅವರವರ ಆಹಾರ ಪದ್ಧತಿ ಅವರ ಇಷ್ಟ. ಧಾರ್ಮಿಕ, ಧರ್ಮದ ನಂಬಿಕೆ ಅವರವರ ಇಷ್ಟವಾಗಿರುತ್ತದೆ. ಅಲ್ಲದೇ ಸರ್ಕಾರ ಯಾವುದನ್ನೂ ಬಲವಂತವಾಗಿ ಹೇರುವುದಿಲ್ಲ ಎಂದು ಸಚಿವ ಸುಧಾಕರ್ ಹೇಳಿದ್ದರು.

ಮೊಟ್ಟೆ ತಿನ್ನಲು ನಿರಾಕರಿಸಿದ ಮಕ್ಕಳಿಗೆ ಬಾಳೆಹಣ್ಣಿನ ಜೊತೆ ಶೇಂಗಾಚಿಕ್ಕಿ ನೀಡಲಿದ್ದು,ಅವೆರಡರಲ್ಲಿ ತಮಗೆ ಯಾವುದು ಬೇಕೆಂದು ಮಕ್ಕಳೇ ಆಯ್ಕೆ ಮಾಡಿಕೊಳ್ಳಬಹುದು. ಮಕ್ಕಳಿಗೆ ನೀಡಲಾಗುವ ಶೇಂಗಾ ಚಿಕ್ಕಿಯನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗುವುದು. ಬೆಲ್ಲ, ನೆಲಗಡಲೆಯಲ್ಲಿ ಹೇರಳವಾದ ಪ್ರೋಟೀನ್ ಮತ್ತು ಕಬ್ಬಿಣದ ಅಂಶ ಇರುವುದರಿಂದ ಬಾಳೆಹಣ್ಣಿನ ಬದಲಾಗಿ ಶೇಂಗಾ ಚಿಕ್ಕಿ ನೀಡಬಹುದು ಎಂದು ಪೌಷ್ಠಿಕಾಂಶ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.