ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಎಂಬ ಹೇಳಿಕೆಯನ್ನು ಹಿಂಪಡೆದ ವಿದ್ಯಾರ್ಥಿನಿ | ಈ ಕುರಿತು ಆಕೆ ನೀಡಿದ ಸ್ಪಷ್ಟನೆ ?!
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ವಿಷಯ ಹಲವಾರು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿಗೆ ನಮಗೆ ಮೊಟ್ಟೆ ಕೊಡಬೇಡಿ ಎಂದು ವಿರೋಧ ಮಾಡಿದರೆ, ನಾವು ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗುತ್ತೇವೆ ಎಂದು ಸವಾಲು ಹಾಕಿದ್ದ ವಿದ್ಯಾರ್ಥಿನಿ ಇದೀಗ ತನ್ನ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾಳೆ.
ಶಾಲೆಯಲ್ಲಿ ಮೊಟ್ಟೆ ನೀಡಲು ಕೆಲ ಮಠಾಧೀಶರ ವಿರೋಧ ಹಿನ್ನೆಲೆಯಲ್ಲಿ ಎಸ್‌ಎಫ್‌ಐ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ವಿದ್ಯಾರ್ಥಿನಿ ವಿವಾದಿತ ಹೇಳಿಕೆ ನೀಡಿದ್ದಳು. ಅದಕ್ಕೆ ಸಂಬಂಧಿಸಿದ ವೀಡಿಯೋ ಫುಲ್ ವೈರಲ್ ಆಗಿತ್ತು.
ಇದೀಗ ತನ್ನ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ವಿದ್ಯಾರ್ಥಿನಿ, ನಾನು ಆವೇಶದಲ್ಲಿ ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಅಂತಾ ಹೇಳಿದ್ದೇನೆ. ಹಾಗಂದ ಮಾತ್ರಕ್ಕೆ ನಾನು ಮಠಕ್ಕೆ ಹೋಗಿ ಮೊಟ್ಟೆ ತಿನ್ನುವುದಿಲ್ಲ. ಆದರೆ, ಮಠಾಧೀಶರು ಮೊಟ್ಟೆ ನೀಡುವುದನ್ನು ವಿರೋಧಿಸಿದ್ದು ತಪ್ಪು. ಸ್ವಾಮೀಜಿಗಳೂ ಕೂಡ ತಮ್ಮ ವಿರೋಧವನ್ನು ಕೈ ಬಿಡಬೇಕು ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾಳೆ.
ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಈ ಯೋಜನೆ ಒಳ್ಳೆಯದು. ಮಕ್ಕಳಿಗೆ ವೈದ್ಯರೇ ಮೊಟ್ಟೆ ತಿನ್ನುವಂತೆ ಸಲಹೆ ನೀಡುತ್ತಾರೆ. ಮೊಟ್ಟೆ ತಿನ್ನದೇ ಇದ್ದವರಿಗೆ ಬಾಳೇಹಣ್ಣು ಕೊಡುತ್ತಿದ್ದಾರೆ. ಆದರೆ, ಮೊಟ್ಟೆ ಕೊಡದಂತೆ ವಿರೋಧ ಮಾಡುವುದು ಸರಿಯಲ್ಲ. ಮೊಟ್ಟೆ ತಿನ್ನದವರು ಬಾಳೇಹಣ್ಣು ತೆಗೆದುಕೊಳ್ಳಲಿ ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿ ವಿದ್ಯಾರ್ಥಿನಿ ಅಂಜಲಿ ಸ್ಪಷ್ಟನೆ ನೀಡಿದ್ದಾಳೆ.