ವಾರಣಾಸಿಯಲ್ಲಿ ಮತ್ತೆ ಮರುಕಳಿಸಿದ “ಕಾಶಿ ವಿಶ್ವನಾಥ”ನ ಗತವೈಭವ !! | ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿ ಐತಿಹಾಸಿಕ ‘ಕಾಶಿ ವಿಶ್ವನಾಥ ಕಾರಿಡಾರ್’ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಸುವರ್ಣ ದೇವಾಲಯವೆಂದೇ ಖ್ಯಾತಿಯನ್ನು ಪಡೆದ ಕಾಶಿ ವಿಶ್ವನಾಥ ದೇವಾಲಯವು ಶಿವನ 12 ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿದೆ. ಕಾಶಿ ವಿಶ್ವನಾಥನ ಸನ್ನಿಧಿಗೆ ಪ್ರತಿವರ್ಷ ಕೋಟಿ ಕೋಟಿ ಭಕ್ತರು ಆಗಮಿಸುತ್ತಾರೆ. ಇಲ್ಲಿ ದರ್ಶನ ಪಡೆದರೆ ಜೀವನ ಪಾವನ ಎಂಬ ನಂಬಿಕೆ ಭಕ್ತರದ್ದು. ಭಕ್ತರ ಅನುಕೂಲಕ್ಕಾಗಿ ಮಹತ್ವದ ಯೋಜನೆಯನ್ನು ಇಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.
‘ಕಾಶಿ ವಿಶ್ವನಾಥ ಕಾರಿಡಾರ್’ ಇಂದು ಲೋಕಾರ್ಪಣೆಗೊಂಡಿದೆ. ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ತಮ್ಮ ಕನಸಿನ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಸುಮಾರು 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್ ನ ಮೊದಲನೇ ಹಂತ ಇದಾಗಿದೆ.
ಗಂಗಾ ಮಾತೆ ನನ್ನ ವಾರಾಣಸಿಗೆ ಕರೆಸಿಕೊಂಡಿದ್ದಾಳೆ ಎಂದು ಪ್ರಧಾನಿ ಮೋದಿ 2014ರ ಚುನಾವಣೆಯ ವೇಳೆ ಹೇಳಿದ್ದರು. ವಾರಣಾಸಿಯಲ್ಲಿ ಸ್ಪರ್ಧೆ ಮಾಡುವುದಕ್ಕೂ ಮುನ್ನ ನಾನು ಇಲ್ಲಿ ಬದಲಾವಣೆ ಮಾಡ್ತೀನಿ ಅಂದಿದ್ರು. ಅದೇ ರೀತಿ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮೋದಿ ಬದಲಾವಣೆ ತಂದಿದ್ದಾರೆ. ಕನಸಿನ ಕಾರಿಡಾರ್ ಯೋಜನೆಯನ್ನು ಮೋದಿ ಇಂದು ಉದ್ಘಾಟಿಸಿದ್ದಾರೆ.
ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆಗೂ ಮೊದಲು ಪವಿತ್ರ ಗಂಗೆಯಲ್ಲಿ ಮಿಂದೆದ್ದ ಪ್ರಧಾನಿ ಮೋದಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಗರ್ಭಗುಡಿಯ ಒಳಗೆ, ಅವರು ಕಾಶಿ ವಿಶ್ವನಾಥ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕಾಂತ್ ಮಿಶ್ರಾ ಸಹಾಯದೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಇಡೀ ಕಾರ್ಯಕ್ರಮ ದೇಶಾದ್ಯಂತ ನೇರ ಪ್ರಸಾರ ಮಾಡಲಾಗಿತ್ತು. ದೇಶಾದ್ಯಂತ 2000ಕ್ಕೂ ಹೆಚ್ಚು ಸಂತರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಐತಿಹಾಸಿಕ ಕಾರಿಡಾರ್
ವಾಸ್ತುಶಿಲ್ಪಿ ಭೀಮಲ್ ಪಟೇಲ್ ಅವರಿಂದ ಕಾರಿಡಾರ್ ವಿನ್ಯಾಸ ಮಾಡಲಾಗಿದೆ. ಈ ಕಾರಿಡಾರ್ ನಿಂದ ಯಾವುದೇ ಅಡೆತಡೆ ಇಲ್ಲದೆ ವಿಶ್ವನಾಥನ ದರ್ಶನ ಪಡೆಯುವುದಕ್ಕೆ ಸಾಧ್ಯವಾಗಲಿದೆ. ಕಾಶಿ ದೇಗುಲ ಹಾಗೂ ಗಂಗಾ ನದಿಯ ನಡುವಿನ ಸಂಚಾರದ ಅವಧಿ ಈ ಕಾರಿಡಾರ್ ನಿಂದ ಕಡಿತವಾಲಿದೆ. ಕಾರಿಡಾರ್ ಭಾಗದಲ್ಲಿ 10 ಸಾವಿರ ಜನ ಧ್ಯಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು 7,000 ಚದರ ಮೀಟರ್ ವೇದಿಕೆ, 7 ಭವ್ಯ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಫುಡ್ ಕೋರ್ಟ್, ವೈದಿಕ ಸೇರಿದಂತೆ ಆಧ್ಯಾತ್ಮಿಕ ಗ್ರಂಥಾಲಯವನ್ನ ಸ್ಥಾಪಿಸಲಾಗಿದೆ. ಜೊತೆಯಲ್ಲಿ ಮೋಕ್ಷ ಗೃಹ ಹಾಗೂ ಗೋಡೋಲಿಯಾ ಗೇಟ್ ಮತ್ತು ಭೋಗಶಾಲಾ ಕೂಡ ತಲೆ ಎತ್ತಿವೆ. ಕಾರಿಡಾರ್ ಉದ್ದಕ್ಕೂ ಭಕ್ತರಿಗಾಗಿ ವಿಶೇಷ ಸ್ಕೈ ಬೀಮ್ ಲೈಟ್ ವ್ಯವಸ್ಥೆಯನ್ನೂ ಮಾಡಲಾಗಿದೆ. 2ನೇ ಹಂತದ ಕಾಮಗಾರಿಯನ್ನ ಮುಂದಿನ ವರ್ಷಕ್ಕೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
339 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಪೂರ್ಣಗೊಳಿಸಲಾಗಿದೆ. ಐತಿಹಾಸಿಕ ದೇಗುಲ ಹಾಗೂ ಅದರ ಸುತ್ತಲಿನ ಸಂಕೀರ್ಣದಲ್ಲಿ ಈ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ವಿಶೇಷ ಅಂದರೆ ದೇವಾಲಯದ ಪರಂಪರೆ ಹಾಗೂ ಸಂಸ್ಕೃತಿಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಕಾಶಿ ವಿಶ್ವನಾಥ ದೇಗುಲದ ಗತವೈಭವವನ್ನು ಪುನರ್ ನಿರ್ಮಿಸಲಾಗಿದೆ. 5,000 ಹೆಕ್ಟೇರ್ ಪ್ರದೇಶದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ತಲೆ ಎತ್ತಿದೆ. ಭೂಸ್ವಾದೀನ ಪಡಿಸಿದ ಬಳಿಕ 300ಕ್ಕೂ ಹೆಚ್ಚು ಕಟ್ಟಡಗಳನ್ನು ಕೆಡವಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಪ್ರಧಾನಿ ಮೋದಿ 2 ದಿನ ವಾರಾಣಸಿಯಲ್ಲಿಯೇ ಇರಲಿದ್ದು, ಇಂದು ಹಾಗೂ ನಾಳೆ ನಡೆಯಲಿರುವ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಇಡೀ ದೇಶದ ಗಮನ ಇದೀಗ ವಾರಾಣಸಿ ಕಡೆಗೆ ನೆಟ್ಟಿದೆ.
ಹಿಂದೂಗಳ ಪವಿತ್ರ ಕ್ಷೇತ್ರ ಹಾಗೂ ವಿಶ್ವ ವಿಖ್ಯಾತ ಪ್ರವಾಸಿ ಕೇಂದ್ರ ಇನ್ನುಮುಂದೆ ಮತ್ತಷ್ಟು ಹೈಟೆಕ್ ಆಗಲಿದೆ. ಇದರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾಶಿಗೆ ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿದೆ.