ಪುತ್ತೂರು : ವಿದ್ಯಾಮಾತಾ ಅಕಾಡೆಮಿಯಲ್ಲಿ ಅಗಲಿದ ಸೇನಾನಿಗಳಿಗೆ ನುಡಿ ನಮನ
ಪುತ್ತೂರು : ಭಾರತ ಮಾತೆಯ ಸೇವೆಗಾಗಿ ತನ್ನ ಬದುಕನ್ನೇ ಅರ್ಪಿಸಿದ ಸಿ ಡಿ ಎಸ್ ಜ| ಬಿಪಿನ್ ರಾವತ್ ರವರ ಜೀವನ ಶೈಲಿ ಇಂದಿನ ಯುವ ಜನತೆಗೆ ಪ್ರೇರಣೆಯಾಗಬೇಕು ಎಂದು ನಿವೃತ್ತ ಯೋಧ ಗೋಪಾಲ ಕೃಷ್ಣ ಕಾಂಚೋಡುರವರು ಹೇಳಿದರು.
ಅವರು ವಿದ್ಯಾಮಾತಾ ಅಕಾಡೆಮಿ ಪುತ್ತೂರು ಇಲ್ಲಿ ನಡೆದ ಭಾರತೀಯ ಸೇನಾ ಪಡೆಗಳ ಮಹಾ ಸೇನಾಧಿಪತಿ ಸಿ ಡಿ ಎಸ್ ಜ| ಬಿಪಿನ್ ರಾವತ್ ಮತ್ತು ಹೆಲಿಕಾಪ್ಟರ್ ದುರಂತದಲ್ಲಿ ನಮ್ಮನ್ನಗಲಿದ ಎಲ್ಲಾ ಸೇನಾನಿಗಳಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನಗಳನ್ನು ಸಲ್ಲಿಸಿ ಮಾತನಾಡಿದರು.
ಕಾಂಚೋಡುರವರು ಭಾರತೀಯ ಸೇನೆಯಲ್ಲಿ 18ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ, ಇವರು ಶಾಂತಿಪಾಲನ ಪಡೆಯ ಯೋಧರಾಗಿ ಶ್ರೀಲಂಕಾದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದೆ ಸಂದರ್ಭದಲ್ಲಿ ಅವರು ತನ್ನ ಸೇವಾ ಅವಧಿಯ ಅನುಭವನ್ನು ಹಂಚಿಕೊಂಡರು.
ಈ ವೇಳೆ ಭಾರತೀಯ ಸೇನೆಯಲ್ಲಿ ಎಸಿಪಿ-ನಾಯಕ್, ಹವಾಲ್ದಾರ್ ಆಗಿ ನಿವೃತ್ತರಾದ N P ತಂಗಚ್ಚನ್ ರವರು ಮಾತನಾಡಿ ಯುವ ಜನತೆ ದೇಶ ಸೇವೆಗಾಗಿ ಸೇನೆಯನ್ನು ಸೇರಬೇಕೆಂದು ಕರೆ ನೀಡಿದರು. ತಂಗಚ್ಚನ್ ರವರು ಜ|ರಾವತ್ ರವರ ಜೊತೆ ಕರ್ತವ್ಯ ನಿರ್ವಹಿಸಿದ್ದರು.
ಇದೇ ವೇಳೆ ಮಾತನಾಡಿದ ಮಾಜಿ ಸೈನಿಕರ ಸಂಘದ ವಕ್ತಾರರಾದ ಜೋಯ್ ಡಿ’ಸೋಜಾರವರು ತನ್ನ ಸೇವಾ ಅವಧಿಯ ಅನುಭವವನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ವಿಚಾರಗಳನ್ನು ತಿಳಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಅಗಲಿದ ಯೋಧರಿಗೆ ನಿವೃತ್ತ ಯೋಧರು, ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಪುಷ್ಪಾರ್ಚನೆ ಸಲ್ಲಿಸಿ ಒಂದು ನಿಮಿಷದ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯ ಸ್ಥಾಪಕರಾದ ಭಾಗ್ಯೆಶ್ ರೈ ರವರು ಅತಿಥಿಗಳನ್ನು ಸ್ವಾಗತಿಸಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು , ಅಕಾಡೆಮಿಯ ತರಬೇತುದಾರ ಚಂದ್ರಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ವೇಳೆ ಅಕಾಡೆಮಿಯ ತರಬೇತುದಾರರಾದ ವಿಜೇತಾ , ದೀಕ್ಷಿತಾ ಮತ್ತು ಮಿಲನರವರು ಉಪಸ್ಥಿತರಿದ್ದರು, ಚಂದ್ರಶೇಖರರವರು ಸಹಕರಿಸಿದರು.