ಉಡುಪಿ : ಅಪ್ರಾಪ್ತ ನಾದಿನಿ ಮೇಲೆ ಅತ್ಯಾಚಾರ ಪ್ರಕರಣ | ಅಪರಾಧಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Share the Article

ಬೈಂದೂರು ಪೊಲೀಸ್ ಠಾಣೆಯಲ್ಲಿ 2018ರಲ್ಲಿ ಹೆಂಡತಿಯ ಅಪ್ರಾಪ್ತ ತಂಗಿ(ನಾದಿನಿ) ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿ ಮೇಲಿನ ಆಪಾದನೆಗಳು ಸಾಬೀತಾಗಿದ್ದು, ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಸುರೇಶ್ ಮರಾಠಿ ( 29 ) ಅಪರಾಧಿಯಾಗಿದ್ದು, ಆತನನ್ನು ಅಪರಾಧಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳ್ ಕಲ್ಪನಾ ತೀರ್ಪು ಪ್ರಕಟಿಸಿದ್ದಾರೆ. ಈತನಿಗೆ 10 ವರ್ಷ ಸಜೆ 20 ಸಾವಿರ ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಸಜೆ ವಿಧಿಸಿ ಆದೇಶಿಸಲಾಗಿದೆ.

ಈತ ತನ್ನ ಹೆಂಡತಿಯ ತಂಗಿಯನ್ನು ಕಾಡಿಗೆ ಕರೆದೊಯ್ದು ಅಲ್ಲಿನ ಮರವೊಂದರ ಮೇಲೆ ಗುಡಿಸಲು ಸಿದ್ದಪಡಿಸಿ ನಿರಂತರವಾಗಿ ಮೂರು ದಿನಗಳ ಕಾಲ ಆಕೆ ಮೇಲೆ ಅತ್ಯಾಚಾರ ನಡೆಸಿದ್ದ. 17 ವರ್ಷ ಪ್ರಾಯದ ಸಂತ್ರಸ್ತ ಯುವತಿ ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು.

ಆರೋಪಿ ಸುರೇಶ್ ಮರಾಠಿಯನ್ನು ಬಂಧಿಸಿದ ಬಳಿಕ ವಿಚಾರಣೆಗಾಗಿ 2018ನೇ ಇಸವಿಯ ಅಕ್ಟೋಬರ್ ತಿಂಗಳಿನಲ್ಲಿ ಉಡುಪಿ ಫೋಕ್ಸೋ ನ್ಯಾಯಾಲಯಕ್ಕೆ ಕರೆತಂದು ರೈಲಿನಲ್ಲಿ ಮರಳಿ ಕಾರಾವರ ಜೈಲಿಗೆ ಕರೆದೊಯ್ಯುತ್ತಿರುವಾಗ ಬೈಂದೂರು ರೈಲು ನಿಲ್ದಾಣದ ಬಳಿ ಆರೋಪಿ ತನಗೆ ವಾಂತಿ ಬರುತ್ತಿದೆಯೆಂಬ ನಾಟಕವಾಡಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪದಡಿಯಲ್ಲಿ ಇಬ್ಬರು ಪೊಲೀಸರನ್ನು ಅಂದಿನ ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿ ಅಮಾನತುಗೊಳಿಸಿದ್ದರು. ಎರಡು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆತ ಕಳೆದ ಆರೇಳು ತಿಂಗಳ ಹಿಂದೆ ನ್ಯಾಯಾಲಯಕ್ಕೆ ಶರಣಾಗತನಾಗಿದ್ದ.

Leave A Reply