ಸೇನಾ ಮುಖ್ಯಸ್ಥ ಮರಣಿಸಲು ಕಾರಣವಾದ ಹೆಲಿಕಾಪ್ಟರ್ ನ ಬ್ಲ್ಯಾಕ್ ಬಾಕ್ಸ್ ಪತ್ತೆ | ಸಾವಿನ ಕಥೆ ಹೇಳಲಿದೆ ಈ ಕಪ್ಪು ಪೆಟ್ಟಿಗೆ !
ತಮಿಳುನಾಡಿನ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದ ವೇಳೆ ನಾಪತ್ತೆಯಾಗಿದ್ದ ಬ್ಲ್ಯಾಕ್ಬಾಕ್ಸ್ ಪತ್ತೆಯಾಗಿದೆ. ಸತತ ಪ್ರಯತ್ನದ ನಂತರ ಈ ಕಪ್ಪು ಪೆಟ್ಟಿಗೆ ದೊರೆತಿದೆ.
ಈ ಬ್ಲ್ಯಾಕ್ಬಾಕ್ಸ್ನಿಂದ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವಾಗಿರುವ ಈಗ ಕತ್ತಲಲ್ಲಿ ಹುದುಗಿರುವ ಮಾಹಿತಿ ಬಹಿರಂಗವಾಗಲಿದೆ.
ತಮಿಳುನಾಡಿನ ಕುನೂರ್ನಲ್ಲಿ ನಿನ್ನೆ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ 13 ಮಂದಿ ಮಂದಿ ಮೃತಪಟ್ಟಿದ್ದರು.
ನಿನ್ನೆಯಿಂದ 40 ಯೋಧರ ತಂಡ ನೀಲಗಿರಿ ದಟ್ಟಾರಣ್ಯದಲ್ಲಿ ಕೂಂಬಿಗ್ ಆಪರೇಶನ್ ಮಾಡಿತ್ತು. ನಿರಂತರ ಜಾಲಾಡಿದ ನಂತರ ಬ್ಲ್ಯಾಕ್ಬಾಕ್ಸ್ ಪತ್ತೆಹಚ್ಚಿದ್ದು, ಇದರಲ್ಲಿ ಹೆಲಿಕಾಪ್ಟರ್ ಪತನದ ವಿವರ ಇರಲಿದೆ. ಈ ಸೀಕ್ರೇಟ್ ಬಾಕ್ಸ್ನಲ್ಲಿ ಕೊನೆಯ ಕ್ಷಣಗಳ ಮಾಹಿತಿ, ಪೈಲೆಟ್ ಮಾತು, ಹೆಲಿಕಾಪ್ಟರ್ ವೇಗದ ಮಾಹಿತಿ ಸಂಗ್ರಹವಾಗಿರಲಿದೆ.
ಏನಿದು ಬ್ಲ್ಯಾಕ್ ಬಾಕ್ಸ್ ?!
ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಸೇರಿದಂತೆ ಇತರ ಕಾರಣಗಳಿಂದ ಕೆಲವೊಮ್ಮೆ ಸಂಭವಿಸುವ ವಿಮಾನ, ಹೆಲಿಕಾಪ್ಟರ್ ದುರಂತದ ನಂತರ ಯಾವ ಕಾರಣದಿಂದ ದುರಂತ ಸಂಭವಿಸಿದೆ ಎಂಬುದನ್ನು ಪತ್ತೆ ಹಚ್ಚಲು ಬ್ಲ್ಯಾಕ್ ಬಾಕ್ಸ್ ತನಿಖಾಧಿಕಾರಿಗಳಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಲಿದೆ.
ಬ್ಲ್ಯಾಕ್ ಬಾಕ್ಸ್ ನಲ್ಲಿ ಎರಡು ಭಾಗಗಳಿದ್ದು, ಒಂದು ಡಿಜಿಟಲ್ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಹಾಗೂ ಫ್ಲೈಟ್ ಡಾಟಾ ರೆಕಾರ್ಡರ್(ಎಫ್ ಡಿಆರ್). ಇದೊಂದು ಹಾರ್ಡ್ ಡಿಸ್ಕ್ ನಂತಿರುವ ಉಪಕರಣವಾಗಿದೆ. ಅಷ್ಟೇ ಅಲ್ಲ ಬ್ಲ್ಯಾಕ್ ಬಾಕ್ಸ್ ಅತ್ಯಂತ ರಕ್ಷಣಾತ್ಮಕ ಯಂತ್ರವಾಗಿದೆ. ಕಪ್ಪುಪೆಟ್ಟಿಗೆಯಲ್ಲಿರುವ ವಾಯ್ಸ್ ರೆಕಾರ್ಡರ್ ನಲ್ಲಿ ಕಾಕ್ ಪಿಟ್ ನಲ್ಲಿ ನಡೆದ ಎಲ್ಲಾ ಸಂಭಾಷಣೆಯೂ ದಾಖಲಾಗಿರುತ್ತದೆ. ಪೈಲಟ್ ಪ್ರಯಾಣಿಕರಿಗೆ ನೀಡುವ ಹವಾಮಾನದ ಮುನ್ಸೂಚನೆ, ರೆಡಿಯೋ ಟ್ರಾಫಿಕ್, ಸಿಬಂದಿಗಳ ಜತೆಗಿನ ಸಂಭಾಷಣೆ ಎಲ್ಲವೂ ವಾಯ್ಸ್ ರೆಕಾರ್ಡ್ ನಲ್ಲಿ ದಾಖಲಾಗಿರುತ್ತದೆ.
ಫ್ಲೈಟ್ ಡಾಟಾದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದ ಎತ್ತರ, ಹವಾಮಾನ, ಗಾಳಿ, ಎಂಜಿನ್ ಸೇರಿದಂತೆ ಎಲ್ಲಾ ಮಾಹಿತಿಯೂ ಬ್ಲ್ಯಾಕ್ ಬಾಕ್ಸ್ ನಲ್ಲಿ ದಾಖಲಾಗಿರುತ್ತದೆ. ಈ ಮಾಹಿತಿಗಳ ಮೂಲಕ ವಿಮಾನ ದುರಂತಕ್ಕೆ ಪ್ರಮುಖ ಕಾರಣ ಏನೆಂಬುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚುತ್ತಾರೆ ಎಂದು ವರದಿ ವಿವರಿಸಿದೆ.