ಸೇನಾ ಹೆಲಿಕಾಫ್ಟರ್ ಪತನದಲ್ಲಿ 14 ಮಂದಿಯ ಪೈಕಿ ಬದುಕುಳಿದ ವಾಯುಪಡೆಯ ಗ್ರೂಪ್ ಕ್ಯಾಪ್ಟನ್, ಶೌರ್ಯ ಚಕ್ರ ವಿಜೇತ ವರುಣ್ ಸಿಂಗ್
ದೆಹಲಿ: ತಮಿಳುನಾಡಿನ ಕುನೂರ್ ನಲ್ಲಿ ನಿನ್ನೆ ಸಂಭವಿಸಿದ ಹೆಲಿಕಾಫ್ಟರ್ ಪತನದಲ್ಲಿ ರಕ್ಷಣ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದು, ಈ ಅಪಘಾತದಲ್ಲಿ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಮಾತ್ರವೇ ಬದುಕುಳಿದಿದ್ದಾರೆ.
ವರುಣ್ ಸಿಂಗ್ ಅವರು ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವಾಯುಪಡೆ ಟ್ವೀಟ್ ಮಾಡಿದೆ. ಇನ್ನೂ ವರುಣ್ ಸಿಂಗ್ ಅವರು ಜೀವಂತ ಇರುವ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಸ್ಪಷ್ಟಪಡಿಸಿ ಟ್ವೀಟ್ ಮಾಡಿದ್ದು, ಘಟನೆಯಲ್ಲಿ ಮೃತಪಟ್ಟ 13 ಮಂದಿಗೆ ಸಂತಾಪ ವ್ಯಕ್ತಪಡಿಸಿರುವ ಅವರು, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.ಕ್ಯಾಪ್ಟನ್ ವರುಣ್ ಸಿಂಗ್ ಅವರು ಪ್ರಸ್ತುತ ವೆಲ್ಲಿಂಗ್ ಟನ್ ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬದುಕುಳಿದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಈ ವರ್ಷದ ಸ್ವಾತಂತ್ರ್ಯ ದಿನದಂದು 2020 ರಲ್ಲಿ ವೈಮಾನಿಕ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್‌ಸಿಎ ತೇಜಸ್ ಯುದ್ಧ ವಿಮಾನವನ್ನು ಉಳಿಸಿದ್ದಕ್ಕಾಗಿ ಶೌರ್ಯ ಚಕ್ರವನ್ನು ನೀಡಲಾಗಿತ್ತು. ಈ ವರ್ಷದ ಆಗಸ್ಟ್ 15 ರಂದು, ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ಸ್ಕ್ವಾಡ್ರನ್‌ನಲ್ಲಿ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ವರುಣ್ ಸಿಂಗ್, ಅವರ ಅಸಾಧಾರಣ ಶೌರ್ಯಕ್ಕಾಗಿ ಭಾರತದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು.