ಭೂಮಿ ಖರೀದಿಸಲು ಹೊರಟವರಿಗೆ ಸಿಹಿಸುದ್ದಿ | ಒಂದೇ ದಿನದಲ್ಲಿ ಭೂ ಪರಿವರ್ತನೆ | ಕಾಯ್ದೆಗೆ ತಿದ್ದುಪಡಿ, ಒಳ ವ್ಯವಹಾರಕ್ಕೆ ಸದ್ಯದಲ್ಲೇ ಕಡಿವಾಣ ಹಾಕಲಿದೆ ರಾಜ್ಯ ಸರ್ಕಾರ
ಭೂಮಿ ಖರೀದಿಸಿ ಭೂಪರಿವರ್ತನೆ
ಮಾಡಿಸಿಕೊಳ್ಳಲು ಇನ್ನು ಮುಂದೆ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ಇಲ್ಲ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುವ ಅಗತ್ಯವೂ ಇಲ್ಲ. ಭೂಮಿ ಖರೀದಿಸಿದವರು ಅರ್ಜಿ ಸಲ್ಲಿಸಿದ 24 ತಾಸಿನಲ್ಲಿ ಭೂಪರಿವರ್ತನೆಗೆ ಅವಕಾಶ ಕಲ್ಪಿಸಲೆಂದು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸಚಿವ ಆರ್. ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಒಂದೇ ದಿನದಲ್ಲಿ ಭೂಪರಿವರ್ತನೆ ಮಾಡಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಭೂ ಪರಿವರ್ತನೆಗಾಗಿ ಹಲವು ಪ್ರಾಧಿಕಾರಗಳ ಅನುಮತಿ ಪಡೆಯಬೇಕಿತ್ತು. ಅಲ್ಲದೆ ಸಂಕೀರ್ಣ ನಿಯಮಾವಳಿಗಳು ಇವೆ. ಅವುಗಳನ್ನು ಸರಳಗೊಳಿಸಿ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿ ಕೊಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಭೂಪರಿವರ್ತನೆಗೆ 6 ತಿಂಗಳ ಕಾಲಾವಕಾಶ ನೀಡುವ ಕಾಯ್ದೆ ರದ್ದುಪಡಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
ಈ ಕಾನೂನು ರದ್ಧತಿಯಿಂದ ಭೂಮಿ ಖರೀದಿಗೆ ಬಂಡವಾಳ ಹೂಡಿದವರು ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವುದು, ಬಡ್ಡಿ ಹೊರೆ ಹೊತ್ತುಕೊಳ್ಳುವುದು ತಪ್ಪಲಿದೆ ಎಂದು ಹೇಳಿದ್ದಾರೆ.
ಅದಲ್ಲದೆ ಭೂ ಪರಿವರ್ತನೆ ಕಲ್ಪಿಸಿದ ಕಾಲಾವಕಾಶವು ಒಳ ವ್ಯವಹಾರಗಳಿಗೆ ದಾರಿ ಮಾಡಿಕೊಟ್ಟಿದೆ. ಪ್ರತಿ ಎಕರೆಗೆ 5 ಲಕ್ಷ ರೂ. ಅನ್ನು ಅಧಿಕಾರಿಗಳ ಮಟ್ಟದಲ್ಲಿ ಅರ್ಜಿದಾರರು ತೆರುತ್ತಿದ್ದಾರೆ. ಈ ರೀತಿಯ ಒಳ ವ್ಯವಹಾರಗಳಿಂದ ವಾರ್ಷಿಕ 400 ಕೋಟಿ ರೂ. ವಹಿವಾಟು ನಡೆಯುವ ಅಂದಾಜಿದ್ದು, ಕೈಗಾರಿಕೆ ಇನ್ನಿತರ ಉದ್ದೇಶಗಳಿಗೆ ಅರ್ಜಿ ಸಲ್ಲಿಸಿದವರು ಅಲೆದು ಬೇಸತ್ತುಕೊಳ್ಳುವ ಪರಿಸ್ಥಿತಿಯಿದೆ. ಅನಗತ್ಯ ಅಡೆತಡೆ, ಹೊರೆ ನಿವಾರಣೆಗಾಗಿ ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿಕೊಡಲು ನಿರ್ಧರಿಸಿದ್ದು ಇದರಿಂದ ಕೋಟ್ಯಂತರ ರೂ.ಗಳ ಒಳ ವ್ಯವಹಾರಗಳಿಗೆ ಕಡಿವಾಣ ಬೀಳಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ರೈತರ ಹಿತ ಹಾಗೂ ಕೃಷಿ-ಕೈಗಾರಿಕೆ ನಡುವಿನ ಬಾಂಧವ್ಯ ವೃದ್ಧಿ, ಕೃಷಿಗೆ ಯುವ ಸಮೂಹವನ್ನು ಆಕರ್ಷಿಸುವ ಉದ್ದೇಶದಿಂದ ಭೂ ಕಂದಾಯ ಕಾಯ್ದೆ ಕಲಂ 79ಎ ಮತ್ತು ಬಿ ರದ್ದು ಮಾಡಿರುವುದು ಕ್ರಾಂತಿಕಾರಕ ನಿರ್ಧಾರವಾಗಿದೆ. ನಿರೀಕ್ಷೆಯಂತೆ ಉತ್ತಮ ಸ್ಪಂದನೆ ದೊರೆತಿದ್ದು, ಇದರಿಂದ ಸ್ಪೂರ್ತಿ ಪಡೆದು ಭೂ ಪರಿವರ್ತನೆ ಕಾಯ್ದೆ ರದ್ದು ಮಾಡುವುದಕ್ಕೆ ಸರ್ಕಾರ ಮುಂದಾಗಿದೆ ಎಂದು ಅಶೋಕ್ ಹೇಳಿದರು.
ಭೂ ಪರಿವರ್ತನೆಗೆ ಒಳಪಡುವ ಜಮೀನು ಒತ್ತುವರಿ ಆಗಿರಬಾರದು. ಪರಿಶಿಷ್ಟರಿಗೆ ಸೇರಿದ ಭೂಮಿ ಕೂಡ ಆಗಿರಬಾರದು. ಹೊಸ ನಿಯಮದ ಅನುಸಾರ, ಅರ್ಜಿ ಸಲ್ಲಿಸಿದವರಿಗೆ ಕೆಲವು ಷರತ್ತು ವಿಧಿಸಿದರೆ ಈ ಪ್ರಕ್ರಿಯೆ ಸುಲಭವಾಗುತ್ತದೆ. ಭೂ ಪರಿವರ್ತನೆ ವಿಳಂಬವಾಗಿ ಅನಗತ್ಯ ಅಲೆದಾಟ ನಡೆಸುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.