5 ನಿಮಿಷಗಳಲ್ಲಿ ಲ್ಯಾಂಡ್ ಆಗಬೇಕಿದ್ದ ಸೇನಾವಾಹನ ಪತನ | ಒಟ್ಟು 13 ಮಂದಿ ದುರಂತ ಅಂತ್ಯ
ಇಂದು ಇಡೀ ದೇಶವೇ ಬೆಚ್ಚಿ ಬೀಳುವಂತಹ ಘಟನೆಯೊಂದು ನಡೆದು ಹೋಗಿದೆ. ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಂಚರಿಸುತ್ತಿದ್ದ Mi-17V5 ಸೇನಾ ಹೆಲಿಕಾಪ್ಟರ್ ಇನ್ನೇನು 5 ನಿಮಿಷಗಳ ಅಂತರದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ತಮಿಳುನಾಡಿನ ಊಟಿ ಬಳಿಯ ಕೂನೂರಿನಲ್ಲಿ ಪತನಗೊಂಡು ಈಗಾಗಲೇ 13 ಮಂದಿ ಸಾವನ್ನಪ್ಪಿದ್ದಾರೆ.
ತಮಿಳುನಾಡು ಪೊಲೀಸ್ ಮತ್ತು ಕೂನೂರಿನಲ್ಲಿರುವ ಭಾರತೀಯ ಸೇನಾ ಉನ್ನತ ಮೂಲಗಳ ಪ್ರಕಾರ, ರಾವತ್ ಪತ್ನಿ ಸೇರಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಾವತ್ ಹಾಗೂ ಇತರ ಇಬ್ಬರಿಗೆ ಸುಟ್ಟ ಗಾಯಗಳಾಗಿದೆ. ಅವರಿಗೆ ಕೊಯಮತ್ತೂರು ಜನರಲ್ ಆಸ್ಪತ್ರೆಯಿಂದ ಆರು ತಜ್ಞ ವೈದ್ಯರ ತಂಡ ಕೂನೂರು ಸೇನಾ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಮುಂದುವರಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇದೀಗ ಇನ್ನಿಬ್ಬರು ಸಾವನ್ನಪ್ಪಿದ್ದಾರೆ.
ವೆಲ್ಲಿಂಗ್ಟನ್ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ಇಂದು ಮಧ್ಯಾಹ್ನ ನಡೆಯಲಿದ್ದ ಕೆಡೆಟ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾವತ್ ಸೇರಿ 14 ಮಂದಿ ಹೆಲಿಕಾಪ್ಟರ್ನಲ್ಲಿ ಆಗಮಿಸುತ್ತಿದ್ದರು. ಇನ್ನೇನು ಲ್ಯಾಂಡ್ ಆಗಲು 10 ಕಿ.ಮೀ. ಇರುವಂತೆ ಮಧ್ಯಾಹ್ನ 12:20ರ ಸುಮಾರಿಗೆ ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿಯಾಗಿ ಪತನಗೊಂಡಿದೆ. ಸ್ಥಳಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ತೆರಳಿದ್ದಾರೆ.
ಬಿಪಿನ್ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ನಲ್ಲಿ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಕರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯ್ತೇಜ್, ಹವಲ್ದಾರ್ ಸತ್ಪಾಲ್ ಸೇರಿದಂತೆ 14 ಮಂದಿ ಇದ್ದರು. 11 ಜನ ಸ್ಥಳದಲ್ಲೇ ಮೃತಪಟ್ಟಿದ್ದರು.
ಉಳಿದ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ಪೈಕಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಬದುಕುಳಿದಿರುವ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ಇನ್ನು ಸಿಡಿಎಸ್ ಬಿಪಿನ್ ರಾವತ್ ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದರ ಖಚಿತ ಮಾಹಿತಿ ಸಿಗಬೇಕಿದೆ.