35 ವರ್ಷದಿಂದ ಪ್ರೀತಿಸಿ, 65 ನೇ ವಯಸ್ಸಿಗೆ ಸಪ್ತಪದಿ ತುಳಿದ ಅಮರ ಪ್ರೇಮಿಗಳು !! | ನಿಜವಾದ ಪ್ರೀತಿಗೆ ಸಾವಿಲ್ಲ ಎಂಬ ಮಾತಿಗೆ ಸಾಕ್ಷಿಯಾಗಿದೆ ಈ ಜೋಡಿ
ಒಂದು ಹೆಣ್ಣಿನ ಬದುಕಿಗೆ ಆಸರೆಯಾಗಿ ಗಂಡು ಅಗತ್ಯವಾದ್ದರಿಂದ ಮದುವೆ ಎಂಬ ಪವಿತ್ರ ಗಂಟು ಹಾಕುತ್ತಾರೆ. ಪತಿಯ ಪ್ರತಿಯೊಂದು ಹೆಜ್ಜೆಯಲ್ಲೂ ಪತ್ನಿ ಜೊತೆಯಾಗುತ್ತಾಳೆ. ಈ ಸಂಬಂಧ ಬಹಳ ಶ್ರೇಷ್ಠವಾದದ್ದು. ಹಾಗೆಯೇ ಮದುವೆಗೆ ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ. ಬಾಳಿನ ಇಳಿ ಸಂಜೆಯಲ್ಲಿ ಬದುಕಿಗೆ ಆಧಾರವಾಗಿರುವುದು ಈ ಸಂಬಂಧವೇ ಎಂಬುದನ್ನು ಸಾಬೀತುಪಡಿಸಿದೆ ಈ ಜೋಡಿ.
ಹೌದು 35 ವರ್ಷದಿಂದ ಪ್ರೀತಿಸಿ, ತಮ್ಮ 65ನೇ ವಯಸ್ಸಿಗೆ ಸಪ್ತಪದಿ ತುಳಿದು ಸಖತ್ ಫೇಮಸ್ ಆಗಿದ್ದಾರೆ ಈ ಅಜ್ಜ-ಅಜ್ಜಿ ಜೋಡಿ. ಈ ಇಳಿವಯಸ್ಸಿನಲ್ಲೂ ತಮ್ಮ ಪ್ರೀತಿಗೆ ಜಯ ಸಿಕ್ಕಿರುವುದು ಆ ಜೋಡಿಯ ಅದೃಷ್ಟವೇ ಸರಿ. ಇಲ್ಲಿದೆ ನೋಡಿ ಆ ಜೋಡಿಯ ಪ್ರೇಮ್ ಕಹಾನಿ.
ಮೈಸೂರಿನ ಹೆಬ್ಬಾಳದ ಚಿಕ್ಕಣ್ಣರಿಗೆ ಅವರ ಸೋದರತ್ತೆ ಮಗಳಾದ ಜಯಮ್ಮ ಅವರ ಮೇಲೆ 35 ವರ್ಷಗಳ ಹಿಂದೆ ಪ್ರೀತಿ ಚಿಗುರಿತ್ತು. ಆದರೆ ಚಿಕ್ಕಣ್ಣನ ಪ್ರೀತಿಗೆ ಜಯಮ್ಮ ಹಾಗೂ ಕುಟುಂಬಸ್ಥರು ಒಪ್ಪಿರಲಿಲ್ಲ. ಹೀಗಾಗಿ ಜಯಮ್ಮ ಅವರನ್ನು ಬೇರೊಬ್ಬರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಆದರೆ ಇತ್ತ ಚಿಕ್ಕಣ್ಣ ಯಾರನ್ನು ಮದುವೆಯಾಗದೇ ಜಯಮ್ಮಳಿಗಾಗಿ ಇಷ್ಟು ವರ್ಷಗಳ ಕಾಲ ಕಾದಿದ್ದರು. ಹೀಗಿರುವಾಗ ಜಯಮ್ಮ ಕಳೆದ ನಾಲ್ಕೈದು ವರ್ಷಗಳಿಂದ ತನ್ನ ಗಂಡನ ಜೊತೆ ಮನಸ್ತಾಪ ಉಂಟಾದ ಕಾರಣ ಪತಿಯಿಂದ ದೂರ ಉಳಿದಿದ್ದರು. ಹಾಗಾಗಿ ಚಿಕ್ಕಣ್ಣ ಜಯಮ್ಮ ನಿಗೆ ಮತ್ತೊಮ್ಮೆ ತಮ್ಮ ಪ್ರೇಮನಿವೇದನೆ ಮಾಡಿದ್ದಾರೆ. ಇಷ್ಟು ವರ್ಷ ತನಗಾಗಿ ಕಾದ ಚಿಕ್ಕಣ್ಣನ ನಿಷ್ಕಲ್ಮಶ ಪ್ರೀತಿಗೆ ಜಯಮ್ಮ ಅರೆಕ್ಷಣದಲ್ಲಿ ಕರಗಿ ಹೋಗಿದ್ದಾರೆ.
ಹಳೆಯ ಪ್ರಿಯತಮ ಚಿಕ್ಕಣ್ಣ ಅವರ ಪ್ರೀತಿಯನ್ನು ಜಯಮ್ಮ ಒಪ್ಪಿಕೊಂಡು, ಮದುವೆಗೂ ಸಮ್ಮತಿ ನೀಡಿದ್ದಾರೆ. ಹೀಗಾಗಿ ಈ ಜೋಡಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನವಜೀವನಕ್ಕೆ ಕಾಲಿಟ್ಟಿದೆ.
ಈ ಮೂಲಕ ಇಷ್ಟು ವರ್ಷಗಳಿಂದ ತಮ್ಮ ಪ್ರಿಯತಮೆಗಾಗಿ ಕಾದಿದ್ದ ಚಿಕ್ಕಣ್ಣನ ಪ್ರೀತಿಗೆ ಜಯ ಸಿಕ್ಕಿದೆ. ಪ್ರಿಯತಮೆಯನ್ನು 35 ವರ್ಷಗಳ ಬಳಿಕ ಮದುವೆಯಾದ ಚಿಕ್ಕಣ್ಣನ ಸಂತಸಕ್ಕೆ ಪಾರವೇ ಇರಲಿಲ್ಲ. ನಿಜವಾದ ಪ್ರೀತಿಗೆ ಸಾವಿಲ್ಲ ಎಂಬುದು ಈ ಜೋಡಿ ಮತ್ತೊಮ್ಮೆ ಸಾಬೀತು ಪಡಿಸಿದೆ.