ಕೋಟಿ ಕೋಟಿ ವೆಚ್ಚದ ಅಕ್ರಮವನ್ನು ಕೇವಲ ಹಳ್ಳಿ ರೈತನ ತೆಂಗಿನಕಾಯಿ ಪತ್ತೆಹಚ್ಚಿದೆ!! ಮಾನವನೇ ಬೆಳೆದ ಬಲಿಷ್ಠ ತೆಂಗಿನಕಾಯಿಗೆ ಹೆಚ್ಚಬಹುದೇ ಬೇಡಿಕೆ!??
ರೈತನೊಬ್ಬ ಬೆಳೆದ ತೆಂಗಿನಕಾಯಿ ಉಳಿದಲ್ಲಾ ಕಾಯಿಗಳಿಗೆ ಪೈಪೋಟಿ ನೀಡಿತ್ತು. ಆ ಕಾಯಿ ಅದೆಷ್ಟು ಬಲಿಷ್ಠವಾಗಿತ್ತೆಂದರೆ ನೆಲಕ್ಕೆ ಬಿದ್ದಾಗ ನೆಲವೇ ಒಡೆಯುವಂತಿತ್ತು. ಒಂದುವೇಳೆ ಕಾಯಿ ಮಾನವನ ತಲೆಗೆ ಬೀಳುತ್ತಿದ್ದರೆ ಅಷ್ಟೇ!!ಆತನನ್ನು ಆಸ್ಪತ್ರೆಗೆ ಸಾಗಿಸಲು ಪುರ್ಸೊತ್ತು ಇರುತ್ತಿರಲಿಲ್ಲವೇನೋ.ಸದ್ಯ ಅಂತಹ ಗಟ್ಟಿಮುಟ್ಟಾದ ತೆಂಗಿನಕಾಯಿ ಅಕ್ರಮವೊಂದನ್ನು ಬಯಲಿಗೆಳೆದಿದ್ದು, ಕಳಪೆ ಕಾಮಗಾರಿಯ ಇಂಚಿಂಚು ಬಟಾಬಯಲಾಗಿದೆ.
ಹೌದು, ಇಂತಹದೊಂದು ಘಟನೆ ನಡೆದಿದ್ದು ಉತ್ತರ ಪ್ರದೇಶದ ಬಿಜನೂರ್ ಸದಾರ್ ನಲ್ಲಿ.ಸುಮಾರು 11.16 ಕೋಟಿ ವೆಚ್ಚದಲ್ಲಿ ನಡೆದ ರಸ್ತೆ ಕಾಮಗಾರಿಯೊಂದರ ಉದ್ಘಾಟನೆ ವೇಳೆ ರಸ್ತೆಗೆ ಒಡೆದ ತೆಂಗಿನಕಾಯಿ ಹೋಳಾಗದೆ ರಸ್ತೆಯೇ ಹಾನಿಯಾಗಿದೆ.
ಗುರುವಾರ ಸಂಜೆ ಬಿಜೆಪಿ ಶಾಸಕಿ ಸುಚಿ ಮೌಸಮ್ ಚೌದರಿ ಅವರು ತೆಂಗಿನಕಾಯಿ ಒಡೆದಾಗ ರಸ್ತೆಯೇ ಹಾನಿಯಾಗಿದ್ದು, ಅಧಿಕಾರಿಗಳ ಕಳಪೆ ಕಾಮಗಾರಿಯ ಚಿತ್ರಣ ಎಲ್ಲರೆದುರು ಬಯಲಾಗಿದೆ.
ಇದಾದ ಬಳಿಕ ಮಾತನಾಡಿದ ಶಾಸಕಿ ”ಪರಿಶೀಲನೆ ನಡೆಸಲು ಕ್ರಮ ಕೈಗೊಂಡಿದ್ದು, ಹೆಚ್ಚುವರಿ ಪರಿಶೀಲನೆಗೆ ಮಾದರಿಯನ್ನೂ ಕಳುಹಿಸಿಕೊಡಲಾಗಿದೆ. ಕಳಪೆ ಕಾಮಗಾರಿಗೆ ಕಾರಣವಾದ ಅಧಿಕಾರಿಗಳನ್ನು ಕೆಲಸದಿಂದಲೇ ಕಿತ್ತೆಸೆಯಲಾಗುವುದು” ಎಂದು ಭರವಸೆ ನೀಡಿದ್ದಾರೆ.