ಬೆಂಗಳೂರಿನಲ್ಲಿ ನಡೆಯಿತು ಜೈಭೀಮ್ ಪ್ರಕರಣ!!ಪೊಲೀಸರ ರಾಕ್ಷಸತನಕ್ಕೆ ಕೈ ಕಳೆದುಕೊಂಡ ಕಳ್ಳತನದ ಆರೋಪಿ!!
ಪೊಲೀಸರ ರಾಕ್ಷಸತನಕ್ಕೆ ಇಲ್ಲೊಬ್ಬ ಆರೋಪಿತ ವ್ಯಕ್ತಿ ತನ್ನ ಕೈ ಕಳೆದುಕೊಂಡಿದ್ದಾನೆ.ಪೊಲೀಸರ ಬಂಧನಕ್ಕೊಳಗಾಗಿ ಪೊಲೀಸರ ತೀವ್ರ ಹಲ್ಲೆಗೆ ಕೈಮುರಿತಗೊಂಡು ಸದ್ಯ ಶಸ್ತ್ರಚಿಕಿತ್ಸೆಗೊಳಗಾದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಘಟನೆಗೆ ಕಾರಣವಾದ ಪೊಲೀಸರನ್ನು ಅಮಾನತಿನಲ್ಲಿಡಲಾಗಿದೆ.
ಘಟನೆ ವಿವರ: ಅಕ್ಟೋಬರ್ 22 ರಂದು ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾಟರಿ ಕಳ್ಳತನ ನಡೆದಿತ್ತು. ಕಳ್ಳತನಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಆತನ ಮನೆಯಿಂದಲೇ ದಸ್ತಗಿರಿ ಮಾಡಿದ್ದರು. ಇದಾದ ಬಳಿಕ ಆರೋಪಿಯನ್ನು ಠಾಣೆಯಲ್ಲಿ ಮೂರುದಿನ ಕೂಡಿಹಾಕಿ ಠಾಣಾ ವ್ಯಾಪ್ತಿಯ ಎಲ್ಲಾ ಕಳ್ಳತನಗಳನ್ನು ಒಪ್ಪಿಕೊಳ್ಳುವತೆ ಚಿತ್ರಹಿಂಸೆ ನೀಡಲಾಗಿತ್ತು.
ಆ ಬಳಿಕ ಮುಚ್ಚಳಿಕೆ ಬರೆಸಿಕೊಂಡು ಆತನ ತಾಯಿಯೊಂದಿಗೆ ಮನೆಗೆ ಕಳುಹಿಸಲಾಗಿತ್ತು.ಆರೋಪಿ ಠಾಣೆಯಿಂದ ಹೊರಬರುವಾಗ ಕೈ ಊದಿಕೊಂಡದ್ದನ್ನು ಗಮನಿಸಿದ ಹೆತ್ತಬ್ಬೆ ಸೀದಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಆತನ ಜೀವ ಉಳಿಸಲು ಕೈ ಕತ್ತರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಆರೋಪಿತ ವ್ಯಕ್ತಿಯ ಸ್ನೇಹಿತರು ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಪೊಲೀಸರ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮೂವರು ಪೇದೆಗಳ ಅಮಾನತು ಮಾಡಲಾಗಿದೆ. ಹೆಡ್ ಕಾನ್ಸ್ಟೇಬಲ್ ನಾಗಭೂಷಣ್ ಗೌಡ, ಕಾನ್ಸ್ಟೇಬಲ್ಗಳಾದ ಎಚ್ ಶಿವರಾಜ್, ಬಿ.ಎನ್ ನಾಗರಾಜ್ ಅಮಾನತಾದ ಸಿಬ್ಬಂದಿಗಳಾಗಿದ್ದಾರೆ.