ದಿನಕ್ಕೆ ಆರು ಬಾರಿ ಸ್ನಾನ ಮಾಡುವ, ಸ್ನಾನ ಮಾಡಿದ ಸೋಪನ್ನು ಕೂಡಾ ತೊಳೆದು ಸ್ವಚ್ಚ ಮಾಡುವ ಪತ್ನಿ | ಇದೀಗ ಡೈವೋರ್ಸ್ ನೀಡಲು ಮುಂದಾದ ಪತಿ !!
ಬೆಂಗಳೂರು: ದಿನಕ್ಕೆ ಆರು ಬಾರಿ ಸ್ನಾನ ಮಾಡುವ ವಿಪರೀತದ ಮನಸ್ಸಿನ ಪತ್ನಿಯ ಅತಿಯಾದ ಸ್ವಚ್ಛತೆಯ ಗೀಳಿನಿಂದ ಬೇಸತ್ತಿರುವ ಪತಿ ದಾಂಪತ್ಯ ಕಡಿದುಕೊಂಡು ವಿವಾಹ ವಿಚ್ಛೇದನಕ್ಕೆ ಮುಂದಾಗಿರುವ ಘಟನೆ ನಡೆದಿದೆ
.ಒಸಿಡಿ ( obsessive compulsive disorder) ಸಮಸ್ಯೆಯಿಂದ ಬಳಲುತ್ತಿರುವ 35 ವರ್ಷದ ಮಹಿಳೆ ಯಾವ ಮಟ್ಟಿಗೆ ಇದ್ದಾಳೆಂದರೆ ಆಕೆ ತಾನು ಬಯಸುವ ಲ್ಯಾಪ್‍ಟಾಪ್, ಸೆಲ್‍ಫೋನ್‍ಗಳನ್ನು ಡಿಟರ್ಜೆಂಟ್ ಹಾಕಿ ಸ್ವಚ್ಛಗೊಳಿಸುವ ಮಟ್ಟಿಗೆ ಶುದ್ಧತೆಯ ಬಗ್ಗೆ ಯೋಚಿಸುತ್ತಾಳೆ.ಈ ಥರದ ಅತಿರೇಕದ ವರ್ತನೆಯಿಂದ ರೋಸಿರುವ ಪತಿ ಇದೀಗ ಪೊಲೀಸರ ಮೊರೆ ಹೋಗಿದ್ದಾನೆ.
ಪೊಲೀಸರು ಈ ಪ್ರಕರಣವನ್ನು ವನಿತಾ ಸಹಾಯವಾಣಿ ಪರಿಹಾರ್‌ಗೆ ಶಿಫಾರಸು ಮಾಡಿದ್ದಾರೆ. ತನಿಖೆ ಶುರು ಆಗಿದೆ.ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಜಯಂತ್, ವಿವಾಹ ಬಳಿಕ ಪತ್ನಿ ಸುಮಾ ಜೊತೆಗೆ ಲಂಡನ್‍ಗೆ ಹೋಗುತ್ತಾರೆ. ಎಂಬಿಎ ಪದವೀಧರೆಯಾಗಿರುವ ಸುಮಾ ಲಂಡನ್‍ನಲ್ಲಿ ಮನೆಯನ್ನು ತುಂಬಾ ಸ್ವಚ್ಛವಾಗಿ ಇರಿಸಿಕೊಳ್ಳುತ್ತಾರೆ. ಮೊದಲ ಮಗು ಹುಟ್ಟಿದ 2 ವರ್ಷದ ಬಳಿಕ ಸುಮಾಗೆ ಈ ಸ್ವಚ್ಛತೆ ಗೀಳು ಮತ್ತಷ್ಟು ಹೆಚ್ಚಾಗುತ್ತದೆ. ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ಶೂ, ಬಟ್ಟೆ, ಸೆಲ್‍ಫೋನ್ ಸ್ವಚ್ಛ ಮಾಡುವಂತೆ ಪದೇ ಪದೇ ಹೇಳುತ್ತಿರುತ್ತಾಳೆ. ಇದರಿಂದ ಕಿರಿಕಿರಿಗೆ ಒಳಗಾಗುವ ಪತಿ, ಈಕೆಯ ಸ್ವಚ್ಛತೆಯ ಅತಿರೇಕದ ವರ್ತನೆಯಿಂದ ಬೇಸತ್ತು ಹೋಗುತ್ತಾನೆ.
ಲಂಡನ್‍ನಿಂದ ಬೆಂಗಳೂರಿಗೆ ಅವರು ವಾಪಸ್ ಆದ ನಂತರ ದಂಪತಿ ಕೌಟುಂಬಿಕ ಸಮಾಲೋಚನೆ ಮಾಡಿಸಿಕೊಳ್ಳುತ್ತಾರೆ. ಆಗ ಈ ಸ್ವಚ್ಛತೆಯ ಗೀಳು ಕೊಂಚ ಕಡಿಮೆಯಾಗುತ್ತದೆ. ಆ ಸಮಯದಲ್ಲಿ ದಂಪತಿಗೆ 2ನೇ ಮಗು ಜನಿಸುತ್ತದೆ. ಕೋವಿಡ್ ಸಂದರ್ಭದಲ್ಲಿ ಸುಮಾಳಿಗೆ ಈ ಸ್ವಚ್ಛತೆಯ ಗೀಳು ಮತ್ತಷ್ಟು ಹೆಚ್ಚಾಗುತ್ತದೆ. ಮನೆಯನ್ನು ಪದೇ ಪದೇ ಸ್ಯಾನಿಟೈಸ್ ಮಾಡುವುದು ಮನೆಯ ಪೀಠೋಪಕರಣಗಳು, ಚಮಚ, ಪ್ಲೋರ್ ಮ್ಯಾಟ್ ಸೇರಿದಂತೆ ಎಲ್ಲ ವಸ್ತುಗಳನ್ನು ಪದೇ ಪದೇ ಉಜ್ಜಿ ತಿಕ್ಕಿ ಸ್ವಚ್ಛ ಮಾಡಲು ಶುರು ಮಾಡುತ್ತಾಳೆ. ಈ ಗೀಳು ಲಾಕ್‍ಡೌನ್ ಸಂದರ್ಭದಲ್ಲಿ ಪೀಕ್ ತಲುಪಿ, ಆಕೆ ದಿನಕ್ಕೆ ಆರು ಬಾರಿ ಸ್ನಾನ ಮಾಡುವುದು, ಸ್ನಾನಕ್ಕೆ ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುವ ಮಟ್ಟಕ್ಕೆ ಇವಳ ವರ್ತನೆ ಬದಲಾಗುತ್ತದೆ ಎಂದಿದ್ದಾರೆ ಆಕೆಯ ಪತಿ.
ಈ ನಡುವೆ ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾ ತಾಯಿ ಮೃತಪಡುತ್ತಾರೆ. ಈ ಘಟನೆ ಬಳಿಕ ಸುಮಾಳ ಸ್ವಚ್ಛತೆ ಹೆಚ್ಚಾಗುತ್ತದೆ. ಲಾಕ್‍ಡೌನ್ ಸಂದರ್ಭದಲ್ಲಿ ಪತಿ ವರ್ಕ್ ಫ್ರಂ ಹೋಮ್ ಕೆಲಸ ಮಡುವಾಗ ಆತನ ಲ್ಯಾಪ್‍ಟಾಪ್, ಸೆಲ್‍ಫೋನ್‍ಗಳನ್ನು ಡಿಟರ್ಜೆಂಟ್ ಹಾಕಿ ಸ್ವಚ್ಛಗೊಳಿಸಿ ಗ್ಯಾಜೆಟ್ ಅನ್ನೆಲ್ಲ ಹಾಳು ಮಾಡಿದ್ದಳು!
ಮಕ್ಕಳು ಶಾಲೆಗೆ ಹೋಗಿ ಬಂದರೆ ಅವರ ಬ್ಯಾಗ್, ಯೂನಿಫಾರ್ಮ್, ಶೂಗಳನ್ನು ಪ್ರತಿ ದಿನ ಸ್ವಚ್ಛ ಮಾಡುತ್ತಿದ್ದಳು. ಈಕೆಯ ಸ್ವಚ್ಛತೆಯ ಅತಿರೇಕದ ವರ್ತನೆಗೆ ಬೇಸತ್ತ ಪತಿ ಜಯಂತ್ ಇದೀಗ ಆಕೆಯಿಂದ ವಿಚ್ಛೇದನ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಾನಸಿಕ ಅಸ್ವಸ್ಥ ಪತ್ನಿಗೆ ಚಿಕಿತ್ಸೆ ಕೊಡಿಸುವುದು ಬಿಟ್ಟು ವಿಚ್ಛೇದನಕ್ಕೆ ಮುಂದಾಗುವುದು ಎಷ್ಟು ಸರಿ ಎನ್ನುವುದು ಪ್ರಶ್ನೆ.