ಅನ್ಯರಿಗೆ ಮಾದರಿಯಾಗಬೇಕು ಅನ್ಯಥಾ ಅನುಯಾಯಿಗಳಾಗಬಾರದು – ಅದ್ವಿತೀಯ ಸಾಧಕಿ ಅದ್ವಿಕ ಶೆಟ್ಟಿ, ಸುರತ್ಕಲ್
ಆಂಗ್ಲ ಭಾಷೆಯಲ್ಲಿ ಒಂದು ಸುವಿಚಾರವಿದೆ. We have to model for others, but not followers of others. ನಾವು ಅನ್ಯರಿಗೆ ಮಾದರಿಯಾಗಬೇಕೇ ಹೊರತು ಅನ್ಯರ ಅನುಯಾಯಿಗಳಾಗಬಾರದು. ಈ ಸುವಿಚಾರ ಅತ್ಯಂತ ಮಾರ್ಮಿಕವು ಅರ್ಥಪೂರ್ಣವೂ ಆಗಿದೆ. ಅನ್ಯರಿಗೆ ಮಾದರಿಯಾಗುವ ಮೊದಲು ನಮಗೆ ನಾವೇ ಮಾದರಿಯಾಗಬೇಕಾಗುತ್ತದೆ. ನಮಗೆ ನಾವೇ ಮಾದರಿಯಾಗಲು ಅನವರತ ಬಿಡದೇ ಕಾಡುವ ಕನಸುಗಳು ಬೇಕು. ಅನ್ಯರನ್ನು ಅನುಸರಿಸದೆ ನಮ್ಮ ಸ್ವಂತದ ಗುರುತನ್ನು ಪಡಿಮೂಡಿಸುವ ಸ್ಥೈರ್ಯಬೇಕು. ಈ ಸ್ಥೈರ್ಯ ಸ್ಥಾಯಿಯಾಗಬೇಕಾದರೆ ಸಾಧಿಸುವ ಛಲ ಬೇಕು. ಗುರಿಮುಟ್ಟುವ ತನಕ ವಿಶ್ರಮಿಸದಿರುವ ರೊಚ್ಚು ಬೇಕು. ಸಮರ್ಪಣಾ ಭಾವಬೇಕು. ತಾಳ್ಮೆ, ಸಹನೆ ಬೇಕು. ಗುರಿ ಸ್ಪಷ್ಟವಾಗಿರಬೇಕು. ಗುರುವಿನಲ್ಲಿ ಸಂಪೂರ್ಣ ವಿಶ್ವಾಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಮೇಲೆ ತನಗೆ ಸಂಪೂರ್ಣ ಭರವಸೆಬೇಕು. ದ್ವಂದ್ವ ರಹಿತವಾದ ಒಂದೇ ನಿಲುವು ಇರಬೇಕು. ಪರಿಶ್ರಮವೇ ಮಂತ್ರವಾಗಬೇಕು. ಪರಿಶ್ರಮ ಪಡದೆ ಸಾಧನೆ ಸಿದ್ಧಿಸುವುದಿಲ್ಲ. ಏಕೆಂದರೆ ಬೆಟ್ಟ ಎಂದಿಗೂ ನಮ್ಮ ಮುಂದೆ ಬಾಗಿ ನಿಲ್ಲುವುದಿಲ್ಲ. ಕಷ್ಟಪಟ್ಟು ಏರಿದರೆ ಅದು ನಮ್ಮ ಪಾದದ ಕೆಳಗೆ ಇರುತ್ತದೆ. ಯಾವುದೇ ಕ್ಷೇತ್ರವನ್ನು ಆಯ್ದುಕೊಂಡರೂ ಅಲ್ಲಿ ತಾನು ಮಾಡುವ ಕೆಲಸವನ್ನು ತನಗಿಂತ ಉತ್ತಮವಾಗಿ, ಇನ್ನಿಲ್ಲದಂತೆ ಇತರರು ಮಾಡಬಾರದು ಎನ್ನುವ ಛಲ ಮನಸ್ಸನ್ನು ಕಾಡುತ್ತ ಇದ್ದರೆ ಆಗ ಅದೊಂದು ತಪಸ್ಸಾಗುತ್ತದೆ. ಏಕಾಗ್ರತೆಯಿಂದ ಹಿಡಿದ ಕೆಲಸ ಮಾಡುವುದೇ ತಪಸ್ಸು. ಈ ತಪಸ್ಸಿನ ಫಲವೇ ಅನ್ಯರಿಗೆ ಮಾದರಿಯಾಗುವ ಯಶಸ್ಸು.
ಅನ್ಯರ ಅನುಯಾಯಿಯಾಗದೆ ಮಾದರಿಯಾಗಬೇಕೆಂದು ಕನಸು ಕಂಡು ಅದ್ವಿತೀಯವಾಗಿ ಸಾಧನೆಗಳ ದಾಖಲೆಗಳನ್ನು ಮಾಡುತ್ತಿರುವವರು ಅದ್ವಿಕ ಶೆಟ್ಟಿ ಸುರತ್ಕಲ್. ಕಾಸರಗೋಡು ಹೆರೂರು ಶ್ರೀ ವೇಣುಗೋಪಾಲ್ ಶೆಟ್ಟಿ ಹಾಗೂ ಪೆರಾರ ಮುಂಡಬೆಟ್ಟು ಗುತ್ತು ಅರ್ಪಿತಾ ಶೆಟ್ಟಿ ದಂಪತಿಗಳ ಏಕೈಕ ಸುಪುತ್ರಿ ಅದ್ವಿಕ. ಸುರತ್ಕಲ್ ಪ್ರದೇಶದಲ್ಲಿ ಜನಪ್ರಿಯ ವೈದ್ಯರಾಗಿದ್ದ ದಿವಂಗತ ಕೆ. ಆರ್. ಶೆಟ್ಟಿಯವರ ಮೊಮ್ಮಗಳು. ಪ್ರಸ್ತುತ ಮಂಗಳೂರು - ಎಂ. ಆರ್. ಪಿ. ಎಲ್ ಇಲ್ಲಿನ ಡೆಲ್ಲಿ ಪಬ್ಲಿಕ್ ಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿ. ಇವರ ಅಭಿರುಚಿ ಮತ್ತು ಸಾಧನಾ ಕ್ಷೇತ್ರಗಳು ಹಲವು. ಭರತನಾಟ್ಯ, ಆಧುನಿಕ, ಜಾನಪದ ನೃತ್ಯ, ಯೋಗ, ಯಕ್ಷಗಾನ, ಚರ್ಚಾ ಸ್ಪರ್ಧೆ, ನಿರೂಪಣೆ, ಸಂಗೀತ, ಭಾಷಣ, ಕಥೆ, ಕವನ, ಪ್ರಬಂಧ ರಚನೆ, ಚಿತ್ರಕಲೆ, ರೂಪದರ್ಶನ, ಅಭಿನಯ, ಫ್ಯಾಷನ್ ಶೋ ಇತ್ಯಾದಿ ಇತ್ಯಾದಿಗಳು. ತಮ್ಮ ನಾಲ್ಕು ವರ್ಷ ಪ್ರಾಯದಲ್ಲಿ ದೂರದರ್ಶನದಲ್ಲಿ ಯಕ್ಷಗಾನ ನೋಡುತ್ತ ಯಕ್ಷನೃತ್ಯಕ್ಕೆ ಮಾರುಹೋದವರು. ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆಯವರಿಂದ ಯಕ್ಷನೃತ್ಯವನ್ನು ಕಲಿತವರು. ಗುರು ಪಡ್ರೆಯವರಿಂದ ಮುಂದಾಳುತ್ವದಲ್ಲಿ ಮಂಗಳೂರು ಪುರಭವನದಲ್ಲಿ ನಡೆದಿದ್ದ 'ಕಾಳಿಂಗ ಮರ್ದನ' ಪ್ರಸಂಗದ ಬಾಲಕೃಷ್ಣನಾಗಿ ಯಕ್ಷರಸಿಕರ ಮನತಣಿಸಿದವರು. ಪ್ರಸಂಗ ಮುಗಿದ ಬಳಿಕ ಚೌಕಿಗೆ ಬಂದು ಕೃಷ್ಣನ ಪಾತ್ರಮಾಡಿದ ಬಾಲಕ ಯಾರು ಎಂದು ಕಲಾಭಿಮಾನಿಗಳು ಕೇಳುತ್ತಿದ್ದರಂತೆ. ಆಗ ಅವರಿಗೆ ಒಂಬತ್ತು ವರ್ಷ ಪ್ರಾಯ. ಸುದರ್ಶನ ವಿಜಯದ ಸುದರ್ಶನ, ಚಕ್ರವ್ಯೂಹದ ಅಭಿಮನ್ಯು, ಹನುಮೋದ್ಭವದ ಹನುಮ, ಶಾಂಭವಿ ವಿಜಯದ ಕಾಳಿ, ದೇವಿ ಮಹಾತ್ಮೆಯ ಪಿಂಗಾಲಕ್ಷ, ಲವಕುಶದ ಲವ ಹೀಗೆ ಹಲವಾರು ಪಾತ್ರಗಳನ್ನು ಸರಿಮಿಗಿಲೆನ್ನಿಸುವಂತೆ ನಿರ್ವಹಿಸಿದವರು.
ಅಭಿಜಾತ ಕಲೆ ಭರತನಾಟ್ಯವನ್ನು ವಿದುಷಿ ಪ್ರತಿಮಾ ಶ್ರೀಧರ್ ಹೊಳ್ಳ ಅವರಿಂದ ಅಭ್ಯಾಸ ಮಾಡಿದವರು. ಆಧುನಿಕ, ಸಮಕಾಲೀನ ಹಾಗೂ ಜಾನಪದ ನೃತ್ಯಗಳನ್ನು ಪ್ರಮೋದ್ ಆಳ್ವ, ಸುನೀಲ್ ಶೆಟ್ಟಿ, ಪ್ರವೀಣ್ ಕುಮಾರ್ ಇವರುಗಳಿಂದ ಕಲಿತವರು. 2012ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಈಟಿವಿ ಯಲ್ಲಿ ಪ್ರಸಾರಗೊಂಡಿದ್ದ ಧೀ ಜ್ಯೂನಿಯರ್ ನೃತ್ಯ ಸ್ಪರ್ಧೆಗೆ ಆಯ್ಕೆಯಾದ ಆರು ಅಭ್ಯರ್ಥಿಗಳಲ್ಲಿ ಅದ್ವಿಕ ಒಬ್ಬರು. ಕಾರ್ಯಕ್ರಮದ ಮೌಲ್ಯಮಾಪಕರುಗಳಾದ ಚೆನ್ನಿ ಪ್ರಕಾಶ್, ಶುಭ ಪೂಂಜಾ, ಪ್ರಿಯಾಂಕ ಇವರೆಲ್ಲರ ನೆಚ್ಚಿನ ಅಭ್ಯರ್ಥಿಯಾಗಿದ್ದವರು ಅದ್ವಿಕ.
2013 ರಲ್ಲಿ ಪೊರ್ಲುದ ಬಂಟೆದಿ ಪ್ರಶಸ್ತಿ. ಫ್ಯಾಷನ್ ಎಬಿಸಿಡಿ ನಡೆಸಿದ ಮಿಸ್ಸಿ ಆ್ಯಂಡ್ ಮಾಸ್ಟರ್ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ಸಿ ಮಂಗಳೂರು ಆಗಿ ಆಯ್ಕೆಗೊಂಡವರು. 2014 ರಲ್ಲಿ ಹಿಂದಿ ಝೀ ವಾಹಿನಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ (ಡಿ. ಐ. ಡಿ) ಲಿಟ್ಲ್ ಮಾಸ್ಟರ್ ಅಂತಿಮ ಸುತ್ತಿನ ಹದಿನಾರು ಅಭ್ಯರ್ಥಿಗಳಲ್ಲಿ ದಕ್ಷಿಣ ಭಾರತದಿಂದ ಆಯ್ಕೆಯಾಗಿದ್ದ ಏಕೈಕ ಅಭ್ಯರ್ಥಿ ಅದ್ವಿಕ. ಈ ಸ್ಪರ್ಧೆಯಲ್ಲಿ ಸಾವಿರಾರು ಚಿನ್ನರು ಸ್ಪರ್ಧಿಸಿದ್ದರು. ಸ್ಪರ್ಧೆಯ ಮೌಲ್ಯ ಮಾಪಕರುಗಳಾದ ಮಿಥುನ್ ಚಕ್ರವರ್ತಿ, ಗೀತಾ ಕಪೂರ್, ಮುದಸ್ಸರ್ ಹಾಗೂ ಅಹ್ಮದ್ ಖಾನ್ ಮೊದಲಾದವರ ಮನಸ್ಸನ್ನು ಗೆದ್ದವರು. 2015ರಲ್ಲಿ ಕನ್ನಡ ಕಲ್ಹರ್ಸ್ ವಾಹಿನಿಯಲ್ಲಿ ಪ್ರಸಾರಗೊಂಡಿದ್ದ ಡ್ಯಾನ್ಸಿಂಗ್ ಸ್ಟಾರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ನೃತ್ಯ ರಸಿಕರ ಮನಗೆದ್ದವರು. ವಿಶೇಷವಾಗಿ ಮೌಲ್ಯ ಮಾಪಕರುಗಳಾದ ಚಿತ್ರನಟ ರವಿಚಂದ್ರನ್, ಪ್ರಿಯಮಣಿ ಹಾಗೂ ಮಯೂರಿ ಅವರುಗಳ ಪ್ರಶಂಸೆಗೆ ಪಾತ್ರರಾದವರು.
2016 ರಲ್ಲಿ ಬಿಡುಗಡೆಗೊಂಡಿದ್ದ ತುಳು ಚಲನಚಿತ್ರ ‘ಬರ್ಸ’ ದಲ್ಲಿ ಬಾಲನಟಿಯಾಗಿ ಪಾದಾರ್ಪಣೆ. ಮೈ ನೇಮ್ ಈಸ್ ಅಣ್ಣಪ್ಪ, ಅಪ್ಪೆ ಟೀಚರ್ ಚಲನಚಿತ್ರಗಳಲ್ಲಿ ಅಭಿನಯ. ಜನನಿ’ ಕನ್ನಡ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.
ಗೌರವ ಪುರಸ್ಕಾರಗಳು: ಅದ್ವಿಕ ಅವರ ಸಾಧನೆಗಳಿಗೆ ಸುಮಾರು ಏಳು ನೂರರಷ್ಟು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಸುಮಾರು ಇನ್ನೂರೈವ್ವತ್ತು ಸಂಘಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ.
2010ರಲ್ಲಿ ಲಿಟ್ಲ್ ಮಾಸ್ಟರ್ ಪ್ರಶಸ್ತಿ, ಬೂಗಿ – ಊಗಿ ಪ್ರಶಸ್ತಿ. 2014 ರಲ್ಲಿ ಹೈದ್ರಾಬಾದಿನಲ್ಲಿ ನಡೆದ
ಈಟಿವಿ ತೆಲುಗು ವಾಹಿನಿಯಲ್ಲಿ ಅತಿಥಿ ಕಲಾವಿದೆಯಾಗಿ ಭಾಗವಹಿಸಿದ್ದಾರೆ. 2015 ರಲ್ಲಿ ರಾಜ್ಯ ಮಟ್ಟದ ಸೌರಭ ಪ್ರಶಸ್ತಿ. 2016 ರಲ್ಲಿ ರಾಜ್ಯ ಮಟ್ಟದ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ, ಸ್ವಸ್ತಿಕ್ ಸಂಭ್ರಮ ಪುರಸ್ಕಾರ, ಬೆಂಗಳೂರು ಬಂಟರ ಸಂಘದಿಂದ ಸಾಧಕ ಪ್ರಶಸ್ತಿ, ಅಗ್ನಿ ದುರ್ಗಾ ಪುರಸ್ಕಾರ, ಧರ್ಮೊಸ್ಥಾನ ಸಂಸ್ಥೆಯಿಂದ ಅತ್ಯುತ್ತಮ ಮನೋರಂಜಕಿ ಪ್ರಶಸ್ತಿಗಳನ್ನು ಪಡೆದವರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಇದರಿಂದ ಕರ್ನಾಟಕ ರಾಜ್ಯೋತ್ಸವ ಸಾಧಕ ಪ್ರಶಸ್ತಿ. ಬದಿಯಡ್ಕದಲ್ಲಿ ನಡೆದ ವಿಶ್ವ ತುಳುವೆರೆ ಆಯನೋ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಸನ್ಮಾನ. ರೋಟರಿ ಸಂಸ್ಥೆ ಮಂಗಳೂರು ವತಿಯಿಂದ ಯುವ ಸಾಧಕ ಪ್ರಶಸ್ತಿ, ರೋಟಾಕ್ಟ್ ಸಂಸ್ಥೆಯಿಂದ ಅತ್ಯುತ್ತಮ ನೃತ್ಯಗಾತಿ ಪ್ರಶಸ್ತಿ. ಬಾರಕೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ತೇರು -2016 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಸನ್ಮಾನ. ಮೂಲ್ಕಿಯಲ್ಲಿ ನಡೆದ ‘ತುಳು ಐಸಿರಿದ ಐಸ್ರ’ ಸಾಹಿತ್ಯ ಸಮ್ಮೇಳನದಲ್ಲಿ ತುಳುವ ಸಿರಿ ಬಿರುದು.
2017 ರಲ್ಲಿ ಮಂಗಳ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ನಡೆದ ದರ್ಪಣ ಕಾರ್ಯಕ್ರಮಲ್ಲಿ ಸನ್ಮಾನ. ಎಸ್. ಡಿ. ಎಂ. ಕಾನೂನು ಕಾಲೇಜಿನಲ್ಲಿ ನಡೆದ "ಲಾ ಪೇಸ್ಟ್ ಲೆಕ್ಸ್ ಅಲ್ಟಿಮ ಕಾರ್ಯಕ್ರಮದಲ್ಲಿ ಸನ್ಮಾನ. ಕನ್ನಡ ಪ್ರಭಾ ಪತ್ರಿಕೆಯವರು ಗುರುತಿಸಿದ 2017ರ ಚೋಟಿ ಚೇತನ ಬಿರುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭಾ ಪುರಸ್ಕಾರ. ರಾಜ್ಯದ ಘನವೆತ್ತ ರಾಜ್ಯಪಾಲರಾದ ವಜುಬಾಯ್ ವಾಲ ಅವರಿಂದ ಮಹಿಳಾ ಮತ್ತು ಮಕ್ಕಳ ಇಲಾಖೆಯ ವತಿಯಿಂದ ಕರ್ನಾಟಕ ರಾಜ್ಯ ಅಸಾಧಾರಣ ಸಾಧನ ಪ್ರಶಸ್ತಿ.
2018 ರಲ್ಲಿ ಮಡಿಲು ಕಲ್ಚರಲ್ ಅವರಿಂದ ಮಡಿಲು ಸಮ್ಮಾನ. ಮಸ್ಕತ್ ಬಂಟರ ಐಸಿರಿ ಅಥಿತಿಯಾಗಿ ಸನ್ಮಾನ. 2019 ರಲ್ಲಿ ನಮ್ಮ ಕುಡ್ಲ ಚಾರಣ ಸಂಘದಿಂದ ನಾಟ್ಯ ಸಿಂಚನ ಪ್ರಶಸ್ತಿ. ಕಾಸರಗೋಡು ದಸರಾ ಉತ್ಸವದಲ್ಲಿ ದಸರಾ ಗೌರವ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಮಿತಿಯಿಂದ ರಾಜ್ಯೋತ್ಸವ ಪ್ರಶಸ್ತಿ. ಉಡುಪಿ ಪಲಿಮಾರು ಮಠದಲ್ಲಿ ನಡೆದ ವಿಶ್ವ ಬಹುಭಾಷಾ ಕವಿ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ವಿದ್ಯಾದೀಶ ಸ್ವಾಮಿಜಿಯವರಿಂದ ಕಲಾರತ್ನ ಪ್ರಶಸ್ತಿ.
2020 ರಲ್ಲಿ ನಮನ ಫ್ರೆಂಡ್ಸ್ ಮುಂಬಯಿ ಇವರಿಂದ ನಮನ ಸಿರಿ ಯುವ ಪ್ರಶಸ್ತಿ.
ಹೆತ್ತವರ ಪ್ರೋತ್ಸಾಹ, ಪ್ರೇರಣೆಗಳಿಂದಲೂ ತನಗೆ ತಾನೇ ಮಾದರಿಯಾಗಬೇಕೆಂಬ ತುಡಿತದಿಂದಲೂ ಅದ್ವಿಕ ಏರಿರುವ ಎತ್ತರ ನಿಜಕ್ಕೂ ಅನ್ಯರಿಗೆ ಮಾದರಿ. ಭವಿತ್ಯವದಲ್ಲೂ ಅವರು ನಿರಂತರ ಮಾದರಿಯಾಗುತ್ತ ಮುನ್ನಡೆಯಲಿ. ಕಲಾರಾಧನೆಯೊಂದಿಗೆ ಭಾರತೀಯ ಆಡಳಿತಾತ್ಮಕ ಸೇವೆ (I. A. S)ಯ ಅಧಿಕಾರಿಯಾಗಬೇಕೆಂಬ ಕನಸು ನನಸಾಗಲಿ.
ಲೇಖನ : ಉದಯ ಶೆಟ್ಟಿ, ಪಂಜಿಮಾರು