ಆಸ್ತಿಗಾಗಿ ತಂದೆತಾಯಿಯನ್ನು ನೆಲಕ್ಕೆ ಕೆಡವಿ ತುಳಿದು ಚಿತ್ರಹಿಂಸೆ ನೀಡಿದ ಮಕ್ಕಳು | ನ್ಯಾಯ ಕೇಳಿಕೊಂಡು ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತ ವೃದ್ಧ ದಂಪತಿಗಳು
ಹೆಣ್ಣು ಮನೆಯ ಕಣ್ಣು ಎಂಬ ಮಾತಿದೆ. ಆದರೆ ಇದೀಗ ಈ ಮಾತಿಗೆ ತದ್ವಿರುದ್ದವೆಂಬಂತೆ ಹೆಣ್ಣನ್ನು ದೂರ ತಳ್ಳುತ್ತಿದ್ದಾರೆ. ಹೆಣ್ಣು ಮಗು ಅಂದ ಕೂಡಲೇ ಇಂದಿಗೂ ಅದೆಷ್ಟೋ ಜನ ಮುಖ ಹಿಂಡಿಸೋರೆ ಜಾಸ್ತಿ. ಗಂಡು ಒಬ್ಬನಿಂದಲೇ ಮನೆ ನೋಡಿಕೊಳ್ಳಲು ಸಾಧ್ಯ ಎಂಬ ಮನಸ್ಥಿತಿಯಲ್ಲಿದ್ದಾರೆ ಜನ.ಇಂಥ ಮನಸ್ಥಿತಿಯುಳ್ಳವರಿಗೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದ ಈ ಘಟನೆ ಕಣ್ಣು ತೆರೆಸುವಂತಿದೆ.
ಬಣಕಾರ ಕೊಟ್ರಪ್ಪ, ಹಾಗೂ ಅನ್ನಪೂರ್ಣಮ್ಮ ಎಂಬ ವೃದ್ಧ ದಂಪತಿ ನಾಲ್ಕು ಪುತ್ರರು ಮತ್ತು ನಾಲ್ಕು ಪುತ್ರಿಯರನ್ನು ಹೆತ್ತಿದ್ದು, ಇದೀಗ ಇವರ ಗೋಳಿನ ಕಥೆ ಕೇಳಿದ್ರೆ ಯಾಕೋ ಬೇಕು ಈ ಗಂಡು ಮಗು ಎನ್ನಬೇಕು!. ಈ ದಂಪತಿ ತಮ್ಮ ಬಳಿ ಇರುವ ಆಸ್ತಿಯನ್ನು ಮಕ್ಕಳಿಗೆ ಹಂಚಿದ್ದು,ತಮ್ಮ ಪಾಲಿನ ಆಸ್ತಿಯನ್ನು ಪಡೆದುಕೊಂಡಿರುವ ನಾಲ್ವರು ಗಂಡುಮಕ್ಕಳು, ಈಗ ಹೆತ್ತವರನ್ನೇ ಬೀದಿಗೆ ತಳ್ಳಿ, ಎಳೆದಾಡಿದ್ದಾರೆ!
ಮನೆಯಲ್ಲಿ ಆಶ್ರಯವಿಲ್ಲದ ದಂಪತಿ ಪುತ್ರರ ಈ ಅನಾಚಾರದಿಂದ ಬೇಸತ್ತು ಪುತ್ರಿಯರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.ಆದರೆ ಇಲ್ಲಿಗೂ ಸುಮ್ಮನಾಗದ ಪುತ್ರಮಹಾಶಯರು ಅಲ್ಲಿಯೂ ಹೋಗಿ ತಮ್ಮ ಸಹೋದರಿಯರು, ಅವರ ಮಕ್ಕಳು ಮೇಲೂ ಹಲ್ಲೆ ಮಾಡಿದ್ದಾರೆ. ಇದಕ್ಕೆ ಕಾರಣ ಏನೆಂದರೆ ಆಸ್ತಿಯನ್ನು ತಮಗೆ ಮಾತ್ರ ನೀಡುವ ಬದಲು ಹೆಣ್ಣುಮಕ್ಕಳಿಗೂ ನೀಡಿದ್ದಾರೆ ಎಂಬ ಕೋಪ! ಇದ್ದಬಿದ್ದ ಆಸ್ತಿಯನ್ನೆಲ್ಲಾ ತಮ್ಮ ಪಾಲಿಗೇ ಮಾಡಬೇಕಿತ್ತು ಎಂಬುದು ಅವರ ಆಸೆ.ಅದನ್ನು ಬಿಟ್ಟು ಹೆಣ್ಣುಮಕ್ಕಳಿಗೂ ಪಾಲು ಕೊಟ್ಟಿದ್ದು ಸರಿಯಲ್ಲ ಎಂದಿರುವ ಈ ಗಂಡುಮಕ್ಕಳು ಅಪ್ಪ-ಅಮ್ಮ ಸೇರಿ ಎಲ್ಲರ ಮೇಲೂ ಹಲ್ಲೆ ನಡೆಸಿದ್ದಾರೆ!
ಅಷ್ಟೇ ಅಲ್ಲದೇ,ನಮ್ಮ ತಂದೆ ತಾಯಿಯನ್ನು ನೀವ್ಯಾಕೆ ನೋಡಿಕೊಳ್ಳುತ್ತಿದ್ದಿರಿ ಅಂತ ಸಹೋದರಿಯ ಮೇಲೆ ದೌರ್ಜನ್ಯ ಮಾಡಿದ್ದಾರೆ. ಇದೀಗ ಈ ವೃದ್ಧ ದಂಪತಿ ನಮಗೆ ನ್ಯಾಯ ಕೊಡಿ ಅಂತ ಎಸ್ಪಿ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ.ಇವರ ಸ್ಥಿತಿ ನೋಡಿದ ಮೇಲಂತೂ ಒಮ್ಮೆ ಯೋಚಿಸುವುದು ಅನಿವಾರ್ಯವಲ್ಲವೇ!?