ಪಾಟ್ನಾ ಪೈರೇಟ್ಸ್ ಕಬಡ್ಡಿ ತಂಡದ ನಾಯಕನಾಗಿ ಪುತ್ತೂರಿನ ಪ್ರಶಾಂತ್ ರೈ
ಪುತ್ತೂರು : ಪ್ರೊ ಕಬ್ಬಡಿ ಸೀಸನ್ 8 ಇದರಲ್ಲಿ ಪ್ರತಿಷ್ಠಿತ ಪಾಟ್ನಾ ಪೈರೇಟ್ಸ್ ತಂಡದ ನಾಯಕನಾಗಿ ಕರ್ನಾಟಕದ ತಂಡದ ಮಾಜಿ ನಾಯಕ ದ.ಕ.ಜಿಲ್ಲೆಯ ಪುತ್ತೂರಿನ ಪ್ರಶಾಂತ್ ರೈ ಆಯ್ಕೆಯಾಗಿದ್ದಾರೆ.
ಹಿಂದಿನ ಸೀಸನ್‍ನಲ್ಲಿ ಪರ್ದೀಪ್ ನರ್ವಾಲ್ ತಂಡದ ಕಪ್ತಾನರಾಗಿದ್ದರು. ಈ ಬಾರಿಯ ಪ್ರೊ ಕಬಡ್ಡಿ ಲೀಗ್ ನ ಸೀಸನ್ 8ರ ಪಂದ್ಯಗಳು ಡಿ.22ರಿಂದ ಬೆಂಗಳೂರಿನಲ್ಲಿ ನಡೆಯಲಿವೆ.
ಕರ್ನಾಟಕ ಕಬಡ್ಡಿ ತಂಡದ ಮಾಜಿ ನಾಯಕ 36ರ ಹರೆಯದ ಪ್ರಶಾಂತ್, ವಿಜಯ ಬ್ಯಾಂಕ್‍ನ ಕಬಡ್ಡಿ ತಂಡದ ಕಪ್ತಾನರಾಗಿದ್ದಾರೆ. ಪ್ರೊ ಕಬಡ್ಡಿ ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ತೆಲುಗು ಟೈಟನ್ಸ್ ತಂಡದ ಸದಸ್ಯರಾಗಿದ್ದ ರೈಡರ್ ಪ್ರಶಾಂತ್ ರೈ ಅವರು ಬಳಿಕ ದಬಾಂಗ್ ಡೆಲ್ಲಿ , ಬಳಿಕ ಹರಿಯಾಣ ಸ್ಟೀಲರ್ಸ್ ತಂಡ ಹಾಗೂ ಯುಪಿ ಯೋಧ ತಂಡವನ್ನು ಪ್ರತಿನಿಧಿಸಿದ್ದರು. 55 ಲಕ್ಷ ರೂ.ಗೆ ತಂಡವೂ ಅವರನ್ನು ಖರೀದಿಸಿತ್ತು. ಅದರೊಂದಿಗೆ ಅವರಿಗೆ ನಾಯಕತ್ವವೂ ಒಲಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೈಕಾರ ಎಂಬಲ್ಲಿನ ನಿವಾಸಿಯಾಗಿರುವ ಪ್ರಶಾಂತ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಾರಣ ಪತ್ನಿ ವಜ್ರೇಶ್ವರಿ ರೈ ಮತ್ತು ಪುತ್ರ ಶತಾಯು ರೈ ಜತೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕಬಡ್ಡಿ ಕ್ರೀಡೆಯನ್ನು ಮೈಗೂಡಿಸಿಕೊಂಡಿದ್ದ ಪ್ರಶಾಂತ್ ಅವರು ಕೋಚ್ ಹಬೀಬ್ ಮತ್ತು ಫಿಲೋಮಿನಾ ಕಾಲೇಜಿನ ಕೋಚ್ ಇಲಿಯಾಸ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಕಬಡ್ಡಿ ಆಟದ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದರು.
ಸತತ ಮೂರು ವರ್ಷ ಕಾಲ ಮಂಗಳೂರು ಅಂತರ್ ಕಾಲೇಜು ಟೂರ್ನಿಗಳಲ್ಲಿ ತಾನು ಕಲಿಯುತ್ತಿದ್ದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಟ್ರೋಫಿ ಗೆದ್ದುಕೊಟ್ಟ ಪ್ರಶಾಂತ್, ಅಂತರ ವಿಶ್ವವಿದ್ಯಾಲಗಳ ಕಬಡ್ಡಿ ಟೂರ್ನಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಪ್ರಶಾಂತ್ ಅವರು ಬೆಂಗಳೂರಿನ ವಿಜಯ ಬ್ಯಾಂಕ್‍ನಲ್ಲಿ ಉದ್ಯೊಗ ಪಡೆದಿದ್ದು, ಅಲ್ಲಿ ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಮುಂದುವರಿಸಿದ್ದರು. ವಿಜಯ ಬ್ಯಾಂಕ್ ಮತ್ತು ರಾಜ್ಯ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದರು.
ಆರನೇ ಆವೃತ್ತಿಯ ಹರಾಜಿನಲ್ಲಿ ಪ್ರಶಾಂತ್ ಕುಮಾರ್ ರೈ, ಯುಪಿ ಯೋಧಾಸ್ ತಂಡಕ್ಕೆ 79 ಲಕ್ಷ ರೂ.ಗಳಿಗೆ ಮಾರಾಟ ಗೊಂಡಿದ್ದರು. ಈ ಮೂಲಕ ರಾಜ್ಯದ ಪರ ಅತ್ಯಧಿಕ ಮೊತ್ತ ಪಡೆದ ಮೊದಲ ಆಟಗಾರ ಎಂಬ ಶ್ರೇಯಸ್ಸು ಪಡೆದುಕೊಂಡಿದ್ದರು.
ನಾಲ್ಕನೇ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿಗೆ 13 ಲಕ್ಷಕ್ಕೆ ಬಿಕರಿಯಾಗಿದ್ದ ಪ್ರಶಾಂತ್ 5ನೇ ಅವತರಣಿಕೆಯಲ್ಲಿ 21 ಲಕ್ಷ ರೂ.ಗೆ ಹರಾಜುಗೊಂಡಿದ್ದರು. ಇದೀಗ 6ನೇ ಆವೃತ್ತಿಗೆ ಸುಮಾರು ಮೂರು ಪಟ್ಟು ಹೆಚ್ಚು ಹಣ ಪಡೆಯುವ ಮೂಲಕ ದೇಶದ ಅಗ್ರಮಾನ್ಯ 20 ರೈಡರ್‍ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ಸೂಕ್ತ ಅವಕಾಶ ಸಿಗದೆ ಎಲೆಮರೆಯ ಕಾಯಿಯಂತಿದ್ದ ಪ್ರಶಾಂತ್ ರೈ, 4ನೇ ಹಾಗೂ 5ನೇ ಆವೃತ್ತಿಯಲ್ಲಿ ಮುನ್ನಲೆಗೆ ಬರುವ ಮೂಲಕ ತಾವೊಬ್ಬ ಪ್ರತಿಭಾವಂತ ರೈಡರ್ ಎಂಬುದನ್ನು ಸಾಬೀತುಪಡಿಸಿದರು. ಪ್ರತಿ ಸೀಸನ್ ನಲ್ಲು ಅತ್ಯುನ್ನತ ಪ್ರದರ್ಶನ ನೀಡುತ್ತಲೆ ಸಾಗಿದ್ದರು.