1 ಕಿ.ಮೀ ದೂರ ಚಿರತೆಯನ್ನು ಅಟ್ಟಾಡಿಸಿಕೊಂಡು ಹೋಗಿ ತನ್ನ ಪುತ್ರನನ್ನು ರಕ್ಷಿಸಿದ ಜೀವಂತ ವಾಪಸ್ ತಂದ ತಾಯಿ, ಮಧ್ಯ ಪ್ರದೇಶ ಸಿಎಂ ಶ್ಲಾಘನೆ!
ಭೋಪಾಲ್: ತನ್ನ ಮಗನನ್ನು ಹೊತ್ತೊಯ್ದಿದ್ದ ಚಿರತೆಯನ್ನು ಬರೊಬ್ಬರಿ 1 ಕಿ.ಮೀ ಅಟ್ಟಾಡಿಸಿಕೊಂಡು ಹೋಗಿ ಅದರೊಂದಿಗೆ ಬಡಿದಾಡಿ ಮತ್ತೆ ತನ್ನ ಮಗುವನ್ನು ಜೀವಂತ ರಕ್ಷಿಸಿಕೊಂಡು ಬಂದಿರುವ ತಾಯಿಯೊಬ್ಬಳ ಕಥೆ ಇದು.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಿಂದ 500 ಕಿ.ಮೀ ದೂರದಲ್ಲಿರುವ ಸಿಧಿ ಜಿಲ್ಲೆಯ ಸಂಜಯ್ ಹುಲಿ ಸಂರಕ್ಷಿತ ಪ್ರದೇಶ ಇದೆ. ಅದರ ಸಮೀಪದಲ್ಲಿರುವ ಬಾಡಿ ಜರಿಯಾ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ತನ್ನ 8 ವರ್ಷದ ಮಗನನ್ನು ಹೊತ್ತೊಯ್ದಿದ್ದ ಚಿರತೆಯನ್ನು ಬೆನ್ನಟ್ಟಿ ಅದರೊಂದಿಗೆ ಕಾದಾಡಿ ಮಗನನ್ನು ರಕ್ಷಿಸಿಕೊಂಡು ಬಂದಿದ್ದಾರೆ.
ಮಹಿಳೆಯ ಧೈರ್ಯ ಸಾಹಸಕ್ಕೆ ಸಿಎಂ ಸಲಾಂ ಹಾಕಿದ್ದು,
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದು
ಇನ್ನು ಮಹಿಳೆಯ ಧೈರ್ಯ ಮತ್ತು ಸಾಹಸವನ್ನು ಪ್ರಶಂಸಿಸಿದ್ದಾರೆ.
ಈ ಕುರಿತು ಟ್ವೀಟ್ ಕೂಡ ಮಾಡಿರುವ ಅವರು, ‘ಕಾಲನ ಕೈಯಿಂದ ಮಗುವನ್ನು ಹೊರತೆಗೆದು ನವಜೀವ ನೀಡಿದ ತಾಯಿಗೆ ನಮನ. ರಾಜ್ಯದ ಸಿಧಿ ಜಿಲ್ಲೆಯಲ್ಲಿ ಒಂದು ಕಿಲೋಮೀಟರ್ ದೂರದವರೆಗೆ ಚಿರತೆಯನ್ನು ಬೆನ್ನಟ್ಟಿದ ನಂತರ ತಾಯಿ ತನ್ನ ತನ್ನ ಮಗುವಿಗಾಗಿ ಸಾವಿನೊಂದಿಗೆ ಸೆಣಸಿದ್ದಾಳೆ. ಸಾವನ್ನು ಎದುರಿಸುವ ಈ ಧೈರ್ಯ ಮಮತೆಯ ಅದ್ಭುತ ರೂಪ. ತಾಯಿ ಶ್ರೀಮತಿ ಕಿರಣ್ ಬೈಗಾ ಅವರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆಗಳು ಎಂದು ಹೇಳಿ ತಾಯಿ ಕಿರಣ್ ಅವರ ಫೋಟೋ ಟ್ವೀಟ್ ಮಾಡಿದ್ದಾರೆ.
ಪೂರ್ತಿ ಘಟನೆ ಏನಾಗಿತ್ತು ?
ಬೈಗಾ ಬುಡಕಟ್ಟು ಸಮುದಾಯದ ಮಹಿಳೆ ಕಿರಣ್ ಅವರು ಗುಡಿಸಲಿನ ಹೊರಗೆ ಬೆಂಕಿ ಉರಿಸಿಕೊಂಡು ತನ್ನ ಮೂವರು ಮಕ್ಕಳೊಂದಿಗೆ ಚಳಿ ಕಾಯಿಸುತ್ತಿದ್ದರು. ಇದ್ದಕ್ಕಿದ್ದಂತೆ ಚಿರತೆಯೊಂದು ದಾಳಿ ಮಾಡಿ ಮಗ ರಾಹುಲ್ ನನ್ನು ಕಚ್ಚಿಕೊಂಡು ಓಡಿ ಹೋಗಿದೆ. ಇದ್ದಕ್ಕಿದ್ದಂತೆ ಬಂದೆರಗಿದ ಚಿರತೆ ಮಗನನ್ನು ಎಳೆದೊಯ್ದ ಘಟನೆಯಿಂದ ಕಿರಣ್ ಧೃತಿಗೆಡದೆ, ತನ್ನ ಇನ್ನಿಬ್ಬರು ಮಕ್ಕಳನ್ನು ಗುಡಿಸಲಿನ ಒಳಗೆ ಕಳುಹಿಸಿ, ಚಿರತೆಯನ್ನು ಬೆನ್ನಟ್ಟಿದ್ದಾರೆ. ಸುಮಾರು 1 ಕಿ.ಮೀ. ವರೆಗೆ ಬೆನ್ನಟ್ಟಿ ಚಿರತೆ ಬಾಯಿಯಿಂದ ಮಗುವನ್ನು ಬಿಡಿಸಿದ್ದಾರೆ. ಚಿರತೆ ದಾಳಿಯಿಂದ ಮಗುವಿಗೆ ಗಾಯವಾಗಿದೆ. ಚಿರತೆಯಿಂದ ಮಗುವನ್ನು ಬಿಡಿಸಲು ಹೋರಾಡಿದ ಸಂದರ್ಭ ಕಿರಣ್ ಕೂಡ ಗಾಯಗೊಂಡಿದ್ದಾರೆ. ಕೊನೆಗೆ ಮಗುವನ್ನು ಚಿರತೆ ಬಾಯಿಂದ ಬಿಡಿಸಿಕೊಂಡು ಹಿಂತಿರುಗುವಲ್ಲಿ ಕಿರಣ್ ಯಶಸ್ವಿಯಾಗಿದ್ದಾರೆ ಎಂದು ಹಿರಿಯ ಅರಣ್ಯಾಧಿಕಾರಿ ಬುಧವಾರ ಪಿಟಿಐಗೆ ತಿಳಿಸಿದ್ದಾರೆ.
‘ಇದ್ದಕ್ಕಿದ್ದಂತೆ ಸಂಭವಿಸಿದ ಚಿರತೆ ದಾಳಿಯಿಂದ ಕಿರಣ್ ಆಘಾತಕ್ಕೆ ಒಳಗಾಗಿದ್ದಾರೆ. ಆದರೆ ಮಾನಸಿಕ ಸ್ಥೈರ್ಯವನ್ನು ಕಳೆದುಕೊಂಡಿಲ್ಲ. ಸುಮಾರು 1 ಕಿ.ಮೀ. ವರೆಗೆ ಚಿರತೆಯನ್ನು ಬೆನ್ನಟ್ಟಿದ್ದಾರೆ. ಪೊದೆಯ ಮರೆಗೆ ಮಗುವನ್ನು ಎಳೆದೊಯ್ದ ಸಂದರ್ಭ ಕೋಲಿನ ಸಹಾಯದಿಂದ ಮತ್ತು ಜೋರಾಗಿ ಕಿರುಚಾಡುತ್ತ ಚಿರತೆಯನ್ನು ಭಯ ಪಡಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಭೀತಿಗೊಳಗಾದ ಚಿರತೆ ಮಗುವನ್ನು ಅಲ್ಲೇ ಬಿಟ್ಟು ಓಡಿಹೋಗಿದೆ. ಮಗುವಿನ ಬೆನ್ನು, ಕುತ್ತಿಗೆ ಮತ್ತು ಕಣ್ಣುಗಳಿಗೆ ಗಾಯಗಳಾಗಿವೆ. ಮಹಿಳೆ ಕಿರಣ್ ಕೂಡ ಗಾಯಗೊಂಡಿದ್ದಾರೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಮಹಿಳೆಯ ಸಾಹಸವನ್ನು ವರ್ಣಿಸಿದ್ದಾರೆ.
ಅಂತೆಯೇ ಈ ಭಾಗದ ಅರಣ್ಯ ವಲಯದ ರೇಂಜರ್ ಅಸೀಮ್ ಭುರಿಯಾ ಅವರು ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯ ಖರ್ಚನ್ನು ಅರಣ್ಯ ಇಲಾಖೆ ಭರಿಸುವುದಾಗಿ ತಿಳಿಸಿದೆ.