ಈ ಮದುವೆಗೆ ಸಾಕ್ಷಿಯಾಯಿತು 200 ವರ್ಷ ಹಳೆಯ ಆಲದ ಮರ!! | ಕುವೆಂಪು, ತೇಜಸ್ವಿಯವರ ಪುಸ್ತಕದ ಆಶಯವೇ ಈ ಸರಳ ವಿವಾಹಕ್ಕೆ ಸ್ಫೂರ್ತಿಯಂತೆ
ಈಗಿನ ಕಾಲದಲ್ಲಿ ಏನಿದ್ದರೂ ಅದ್ಧೂರಿ ಮದುವೆಗಳದ್ದೇ ಕಾರುಬಾರು. ನಮ್ಮಲ್ಲಿ ಹಲವು ಮಂದಿ ಮದುವೆಗಾಗಿ ನೀರಿನಂತೆ ಹಣ ಪೋಲು ಮಾಡುತ್ತಾರೆ. ಬೆರಳಣಿಕೆಯಷ್ಟು ಜನ ಮಾತ್ರ ಆದರ್ಶವಾಗಿ ಮದುವೆಯಾಗುವ ಮೂಲಕ ಸಮಾಜಕ್ಕೆ ಮಾದರಿಯಾಗುತ್ತಾರೆ. ಅಂತಹ ಆದರ್ಶ ಜೋಡಿಯಾಗಿ ಹೊರಹೊಮ್ಮಿದೆ ಈ ನವ ಜೋಡಿ.
ತಮ್ಮ ಜೀವನದಲ್ಲಿ ಆದರ್ಶಗಳನ್ನು ಪಾಲಿಸಿಕೊಂಡು ಬಂದ ಜನತೆಗೆ ಇಷ್ಟವಾಗೋದು ಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪರಿಕಲ್ಪನೆ. ಈ ಹಿಂದೆ ಎಷ್ಟೋ ಜನರು ಮಂತ್ರ ಮಾಂಗಲ್ಯ ಪರಿಕಲ್ಪನೆಯಲ್ಲಿ ಮದುವೆ ಆಗಿದ್ದಾರೆ. ಇದೀಗ 200 ವರ್ಷದ ಹಳೆಯ ಆಲದ ಮರವೊಂದು ಮಂತ್ರ ಮಾಂಗಲ್ಯಕ್ಕೆ ಸಾಕ್ಷಿಯಾಗಿದೆ. ಈ ವಿಶೇಷ ವಿವಾಹ ನ.28ರಂದು ಮೈಸೂರು, ಟಿ.ನರಸೀಪುರ ರಸ್ತೆಯಲ್ಲಿರುವ ‘ಆಕ್ಸಿಜನ್ ಏಕರ್ಸ್’ ತೋಟದ ಮನೆಯಲ್ಲಿ ನೆರವೇರಿದೆ.ಮೈತ್ರಿ ಮತ್ತು ಕಮಲೇಶ್ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಜೋಡಿ. ಮೈಸೂರು ಮೂಲದವರಾದ ಮೈತ್ರಿ ಎಂಎಲ್ಎಂ ಪದವೀಧರೆ, ಇನ್ನು ಕಮಲೇಶ್ ಎಂ.ಟೆಕ್ ಪದವೀಧರರಾಗಿದ್ದಾರೆ.
ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಓದಿಕೊಂಡು ಬೆಳೆದಿದ್ದ ಮೈತ್ರಿ, ‘ಮಾನವ ಹಕ್ಕುಗಳ ಕಾನೂನು’ ವಿಷಯದಲ್ಲಿ ಸ್ನಾತಕೋತ್ತರ ಕಾನೂನು ಪದವಿ ಪಡೆದುಕೊಂಡಿದ್ದಾರೆ. ಇದೀಗ ಪುತ್ರಿಯ ಇಚ್ಛೆಯಂತೆಯೇ ಪೋಷಕರಾದ , ಪ್ರಭಾಕರ್ ಮತ್ತು ಅಪರ್ಣಾ ವಿವಾಹ ನೆರವೇರಿಸಿದ್ದಾರೆ.
ಮರಿಸ್ವಾಮಿ ಮತ್ತು ವಿನೋದಾ ದಂಪತಿಯ ಪುತ್ರರಾಗಿರುವ ಕಮಲೇಶ್, ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರೂ ಆಗಿದ್ದ ಅವರು ಸ್ವಾವಲಂಬನೆಯ ಬದುಕನ್ನು ಮೈಗೂಡಿಸಿಕೊಂಡಿದ್ದಾರೆ. ಇದೀಗ ಅನಾವಶ್ಯಕವಾಗಿ ಹೆಚ್ಚು ಹಣ ಪೋಲು ಮಾಡದೇ ಸರಳವಾಗಿ ಮದುವೆಯಾಗುವ ಮೂಲಕ ಮಾದರಿಯಾಗಿದ್ದಾರೆ.
ಹೇಗಿತ್ತು ಗೊತ್ತಾ ಮದುವೆ??
ಆಕ್ಸಿಜನ್ ಏಕರ್ಸ್ ತೋಟದಲ್ಲಿರುವ ಹಳೆಯ ಆಲದ ಮರದಡಿಯೇ ಜೋಡಿಗೆ ಮದುವೆ ಮಂಟಪವಾಗಿತ್ತು. ಮರದಲ್ಲಿ ಆಶ್ರಯ ಪಡೆದಿದ್ದ ಹಕ್ಕಿ, ಪಕ್ಷಿಗಳ ಧನಿಯೇ ಮಂಗಳವಾದ್ಯವಾಗಿತ್ತು. ಪೂರ್ಣಚಂದ್ರ ತೇಜಸ್ವಿ ಅವರ ಒಡನಾಡಿ ಶಾಂತಾ ಪ್ರಸಾದ್ ಅವರು ಮಂತ್ರ ಮಾಂಗಲ್ಯ ವಿವಾಹ ಸಂಹಿತೆ ಬೋಧಿಸಿದರು. ವಿವಾಹ ಸಂಹಿತೆ ಬೋಧಿಸಿದ ಬಳಿಕ ಜೋಡಿ ದಂಪತಿಗಳಾದರು. ನಾವು ನಿಂತ ಈ ನೆಲ, ಈ ಮರ ಮತ್ತು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ವಿವಾಹ ಬಂಧನಕ್ಕೆ ಒಳಗಾಗಿದ್ದೇವೆ ಎಂದು ಕಮಲೇಶ್–ಮೈತ್ರಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಸರಳವಾದ ಊಟದ ವ್ಯವಸ್ಥೆ
ಈ ವಿಶೇಷ ಮದುವೆಯಲ್ಲಿ ಎರಡೂ ಕುಟುಂಬದ ಸದಸ್ಯರು ಮತ್ತು ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಯ ಅತ್ಯಾಪ್ತ ಸ್ನೇಹ ವರ್ಗ ಹಾಜರಿತ್ತು. ಒಟ್ಟಾರೆಯಾಗಿ ಕೇವಲ ನೂರು ಜನರು ಮದುವೆಯಲ್ಲಿ ಉಪಸ್ಥಿತರಿದ್ದರು. ಮದುವೆಗೆ ಆಗಮಿಸಿದ ಅತಿಥಿಗಳಿಗೆ ಅಕ್ಕಿ–ರಾಗಿ ರೊಟ್ಟಿ, ಉಚ್ಚೆಳ್ಳು ಚಟ್ನಿ, ಹುರಳಿಕಾಳಿನ ಸಾಂಬಾರ್, ಹೋಳಿಗೆಯ ಊಟ ಆಯೋಜಿಸಲಾಗಿತ್ತು.
ಅದಲ್ಲದೆ,ರಾಸಾಯನಿಕ ಮುಕ್ತ ಬೆಲ್ಲ ಹಾಗೂ ಧಾನ್ಯಗಳಿಂದ ತಯಾರಿಸುವ ಮಿಠಾಯಿ (ಉಂಡೆ)ಯನ್ನು ಅತಿಥಿಗಳಿಗೆ ವಿತರಣೆ ಮಾಡಲಾಯಿತು. ಈ ಮಿಠಾಯಿಯನ್ನು ಮಾನಸಿಕ ಅಂಗ ವೈಕಲ್ಯ ಅಭಿವೃದ್ಧಿ ಸಂಘ (ಎಡಬ್ಲ್ಯುಎಂಡಿ)ದ ವಿಶೇಷ ಮಕ್ಕಳ ತಾಯಂದಿರು ತಯಾರಿಸಿದ ಚೀಲದಲ್ಲಿ ಇರಿಸಿ ವಿತರಿಸಲಾಯ್ತು.
ಕುವೆಂಪು, ತೇಜಸ್ವಿ ಅವರನ್ನು ಓದುತ್ತಾ ಬೆಳೆದ ನನಗೆ ಅವರ ಆಶಯದ ವಿವಾಹ ಮನಸ್ಸಿಗೆ ಹಿಡಿಸಿತ್ತು. ಅರ್ಥರಹಿತ ಆಚರಣೆ, ಅನಗತ್ಯ ಖರ್ಚು ಬೇಕಿಲ್ಲ ಎಂದು ಕಮಲೇಶ್ ಹೇಳುತ್ತಾರೆ. ಇನ್ನು ವಧು ಮೈತ್ರಿ ಮಾತನಾಡಿ, ನನ್ನ ಪೋಷಕರು ಸಹ ಸರಳವಾಗಿಯೇ ಮದುವೆ ಆಗಿದ್ದರು. ಸ್ನೇಹಯುತ ಬದುಕು, ಪುಸ್ತಕಗಳ ಒಡನಾಟ ನಮ್ಮ ಸರಳ ವಿವಾಹಕ್ಕೆ ಸ್ಫೂರ್ತಿಯಾಯಿತು ಎಂದು ಹೇಳಿದ್ದಾರೆ.
ಈ ಪರಿಯಾಗಿ ವಿವಾಹವಾದ ಈ ಜೋಡಿ ತುಂಬಾ ಜನಕ್ಕೆ ಮಾದರಿಯಾಗಿದ್ದಾರೆ. ಅದ್ಧೂರಿ, ಆಡಂಬರದ ಮದುವೆಯ ನಡುವೆ ಈ ರೀತಿ ಆದರ್ಶವಾಗಿ ಮದುವೆಯಾಗುವ ಜೋಡಿಗಳ ಸಂಖ್ಯೆ ಇನ್ನೂ ಹೆಚ್ಚಲಿ ಎಂಬುದೇ ಆಶಯ.