ಬ್ಯೂಟಿ ಟಿಪ್ಸ್ :
ತಲೆಹೊಟ್ಟು ಸಮಸ್ಯೆಯಿಂದ ಶೀಘ್ರ ಮುಕ್ತಿ ಬೇಕೆ?? | ಹಾಗಿದ್ರೆ ಈ 10 ಸುಲಭ ಮನೆ ಮದ್ದುಗಳನ್ನು ಫಾಲೋ ಮಾಡಿ!!

ತಲೆಯಲ್ಲಿ ಉಂಟಾಗುವ ಡ್ಯಾಂಡ್ರಫ್ ಅಥವಾ ತಲೆಹೊಟ್ಟು ಸಾಮಾನ್ಯವಾದುದು. ಇಂದಿನ ಆಧುನಿಕ ಜೀವನ ಶೈಲಿಯಿಂದ ಬಹುತೇಕ ಜನರು ತಲೆಹೊಟ್ಟಿನ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ.

ತಲೆಹೊಟ್ಟು ನೆತ್ತಿಯ ಮೇಲೆ ನೆಲೆಸಿರುವ ಶಿಲೀಂಧ್ರದಿಂದ ಉಂಟಾಗುತ್ತದೆ. ಇದರಿಂದ ನೆತ್ತಿಯ ತುರಿಕೆಗೆ ಹಾಗೂ ನೆತ್ತಿಯ ಉರಿಯೂತಕ್ಕೆ ಕಾರಣವಾಗುತ್ತದೆ. ಇದು ಸಾಮಾನ್ಯವಾದ ಸ್ಥಿತಿಯಾಗಿದ್ದರೂ ಕೂಡ ನಿರ್ಲಕ್ಷಿಸಬಾರದು. ಕೆಲವೊಮ್ಮೆ ತಲೆಹೊಟ್ಟು ಬಹಳಷ್ಟು ಕಿರಿಕಿರಿ ಮತ್ತು ಅಸ್ವಸ್ಥತೆಯನ್ನು ಉಂಟು ಮಾಡಬಹುದು.

ತಲೆಹೊಟ್ಟನ್ನು ನಿವಾರಿಸಿಕೊಳ್ಳುವುದಕ್ಕಾಗಿ ಯಾವುದ್ಯಾವುದೋ ರಾಸಾಯನಿಕ ಶ್ಯಾಂಪೂಗಳನ್ನು ಬಳಸಿ ಸೋತು ಹೋಗಿರುತ್ತಾರೆ. ಆದರೆ ಅದೆಲ್ಲವನ್ನು ಬಿಟ್ಟು ಮನೆಯಲ್ಲಿ ನೈಸರ್ಗಿಕ ಪದಾರ್ಥಗಳನ್ನು ಬಳಿಸಿ ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಬಹುದಾಗಿದೆ.

ಹೌದು, ಇಂದು ನಾವು ಮನೆಯಲ್ಲೇ ನೈಸರ್ಗಿಕ ಪದಾರ್ಥಗಳನ್ನು ಉಪಯೋಗಿಸಿಕೊಂಡು ತಲೆಹೊಟ್ಟು ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು 10 ರೀತಿಯ ಪರಿಹಾರಗಳನ್ನು ತಿಳಿಸುತ್ತೇವೆ.

ತೆಂಗಿನ ಎಣ್ಣೆ:

ತೆಂಗಿನ ಎಣ್ಣೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸುತ್ತವೆ. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗೆ ತೆಂಗಿನ ಎಣ್ಣೆಯನ್ನು ಕಾಯಿಸಿ ತಲೆಗೆ ಮಸಾಜ್​ ಮಾಡಿಕೊಂಡು ಮಲಗಬೇಕು. ನಂತರ ಬೆಳಿಗ್ಗೆ ಎದ್ದು, ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡುವುದರಿಂದ ಹೊಟ್ಟು ಕಡಿಮೆಯಾಗುವ ಸಾಧ್ಯತೆ ಹೆಚ್ಚು. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ಬೇಕಿಂಗ್ ಸೋಡಾ:

ಅಡಿಗೆ ಸೋಡಾ ತಲೆಹೊಟ್ಟಿಗೆ ಒಂದು ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಮೂಲಕ ನಿಧಾನವಾಗಿ ತಲೆಹೊಟ್ಟನ್ನು ಹೊರಹಾಕುತ್ತದೆ. ಒದ್ದೆಯಾದ ಕೂದಲಿಗೆ ನೇರವಾಗಿ ಅಡಿಗೆ ಸೋಡಾವನ್ನು ಹಾಕಿ ಅದನ್ನು ನಿಮ್ಮ ನೆತ್ತಿಗೆ ಮಸಾಜ್ ಮಾಡಿ. ಒಂದು ನಿಮಿಷ ಅಥವಾ ಎರಡು ನಿಮಿಷಗಳ ಕಾಲ ಹಾಗೆ ಬಿಡಿ, ನಂತರ ನಿಮ್ಮ ಕೂದಲನ್ನು ನೀರಿನಿಂದ ತೊಳೆಯಿರಿ.

ಬೆಳ್ಳುಳ್ಳಿ:

ತಲೆಹೊಟ್ಟು ಚಿಕಿತ್ಸೆಗಾಗಿ ನೀವು ಬೆಳ್ಳುಳ್ಳಿಯನ್ನು ಸಹ ಬಳಸಬಹುದು. ಮೊದಲಿಗೆ, ಒಂದು ಅಥವಾ ಎರಡು ಬೆಳ್ಳುಳ್ಳಿಗಳನ್ನು ಪುಡಿಮಾಡಿ ನಂತರ ನೀರಿನಲ್ಲಿ ಮಿಶ್ರಣ ಮಾಡಿ ಅದನ್ನು ನಿಮ್ಮ ನೆತ್ತಿಗೆ ಹಚ್ಚಿ. ಕೆಲ ಹೊತ್ತಿನ ಬಳಿಕ ತಲೆ ಸ್ನಾನ ಮಾಡಿ.

ಅಲೋವೆರಾ:

ಅಲೋವೆರಾ ತಲೆಯನ್ನು ತಂಪಾಗಿಡುವುದು ಮಾತ್ರವಲ್ಲದೆ, ನೆತ್ತಿಯಲ್ಲಿನ ಹೊಟ್ಟನ್ನು ಹೊರಹಾಕುತ್ತದೆ. ನೀವು ಅಲೋವೆರಾದಿಂದ ತೆಗೆದ ಜೆಲ್​ನ್ನು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿ. ಸುಮಾರು 20 ರಿಂದ 30 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಲೆ ತೊಳೆದುಕೊಳ್ಳಿ.

ಮೆಂತೆ ಬೀಜ:

ಮೆಂತೆಯ ಬೀಜವನ್ನು ಅರೆದು ಪೇಸ್ಟ್ ಮಾಡಿ ತಲೆಕೂದಲಿಗೆ ಹಚ್ಚಿದರೆ ತಲೆ ಹೊಟ್ಟು ಕಡಿಮೆಯಾಗುವುದು. ಕೊಬ್ಬರಿಯೆಣ್ಣೆಯಲ್ಲಿ ಮೆಂತೆಯ ಬೀಜಗಳನ್ನು ನೆನೆಯಿಸಿ, ಅದನ್ನು ತಲೆಗೆ ಬಳಸಿದರೆ ಅದರ ಔಷಧೀಯ ಗುಣದಿಂದ ತಲೆಗೆ ತಂಪು ಕೊಡುವುದರ ಜೊತೆಗೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ರಾಮಬಾಣವಾಗಿದೆ.

ಮೊಟ್ಟೆಯ ಬಿಳಿ ಭಾಗ:

ಮೊಟ್ಟೆಯ ಬಿಳಿ ಭಾಗವನ್ನು ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಬೇಕು. ಇದರಿಂದ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

ಶುಂಠಿ ಮತ್ತು ಆಲಿವ್ ಎಣ್ಣೆ:

ಶುಂಠಿಯನ್ನು ಆಲಿವ್ ಎಣ್ಣೆಗೆ ಸೇರಿಸಿ ಬಿಸಿ ಮಾಡಿ ಸ್ನಾನಕ್ಕೆ ಹೋಗುವ ಕೆಲವು ನಿಮಿಷಗಳ ಮುನ್ನ ತಲೆಗೆ ಹಚ್ಚಿ ಮಸಾಜ್ ಮಾಡಿಕೊಂಡು 5 ನಿಮಿಷದ ನಂತರ ಸ್ನಾನ ಮಾಡಿದರೆ ಬೇಗನೆ ತಲೆಹೊಟ್ಟು ತೊಲಗುತ್ತದೆ.

ಕಾಫಿ ಹೇರ್ ಮಾಸ್ಕ್‌ :

ಒಂದು ಚಮಚ ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಒಂದು ಚಮಚ ಕಾಫಿ ಪುಡಿ, ಒಂದು ಚಮಚ ಜೇನು ಸೇರಿಸಿ ಮಿಕ್ಸ್ ಮಾಡಿ 2 ನಿಮಿಷ ಬಿಡಿ. ನಂತರ ರೆಡಿಯಾದ ಕಾಫಿ ಮಾಸ್ಕ್‌ ಅನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ತಲೆ ಹೊಟ್ಟು ಹೋಗುವವರೆಗೆ ವಾರದಲ್ಲಿ 2-3 ಬಾರಿ ಕಾಫಿ ಮಾಸ್ಕ್​ ಬಳಸಿ.

ನಿಂಬೆ ಮತ್ತು ಮೊಸರು:

ಮುಕ್ಕಾಲು ಕಪ್ ಮೊಸರಿಗೆ ನಿಂಬೆರಸ ಹಿಂಡಿ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ನಿಮ್ಮ ತಲೆ ಕೂದಲು ಶೈನಿಂಗ್​ ಜೊತೆ ಹೊಟ್ಟಿನ ನಿವಾರಣೆ ಕೂಡಾ ಆಗುತ್ತದೆ. ಇದು ಅತಿ ಸುಲಭವಾದ ನೈಸರ್ಗಿಕ ವಿಧಾನವಾಗಿದೆ.

ಬೇವು ಮತ್ತು ಮೊಸರು :

ಮೊದಲು ಬೇವಿನ ಎಲೆಯನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಂದು ಕಪ್​ ಮೊಸರು ಸೇರಿಸಿನಂತರ ತಲೆಗೆ ಹಚ್ಚಿಕೊಳ್ಳಿ. 20 ನಿಮಿಷದ ನಂತರ ಕೂದಲನ್ನು ತೊಳೆದುಕೊಳ್ಳಿ. ಮೊಸರಿನಲ್ಲಿ ತಂಪಾದ ಮತ್ತು ಬೇವಿನ ಎಲೆಯಲ್ಲಿ ಆಂಟಿ ಫಂಗಲ್​​ ಗುಣಲಕ್ಷಣ ಇರುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

Leave A Reply

Your email address will not be published.