ಹೆರಿಗೆ ನೋವಿನ ನಡುವೆಯೂ ಸೈಕಲ್ ತುಳಿಯುತ್ತಲೇ ಆಸ್ಪತ್ರೆ ತಲುಪಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂಸದೆ
ಹೆಣ್ಣು ಪರಿಪೂರ್ಣವಾಗುವುದು ಆಕೆ ತಾಯಿ ಆದಾಗಲೇ ಎಂಬ ಮಾತಿದೆ. ಮಗುವಿಗೆ ಜನ್ಮ ನೀಡುವುದು ಆಕೆಯ ಪುನರ್ಜನ್ಮವಾಗಿರುತ್ತದೆ. ಇಂತಹ ಹೆರಿಗೆ ನೋವಿನ ಸಂದರ್ಭದಲ್ಲಿ ಸೈಕಲ್ ಏರಿ ಮಗುವಿಗೆ ಜನ್ಮ ನೀಡಿದ ವಿಶೇಷ ಘಟನೆಯೊಂದು ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ. ಹೆರಿಗೆ ನೋವಿನ ನಡುವೆಯೂ ನ್ಯೂಜಿಲೆಂಡ್ನ ಸಂಸದೆಯೋರ್ವರು ಸೈಕಲ್ ತುಳಿದುಕೊಂಡೇ ಆಸ್ಪತ್ರೆಗೆ ತೆರಳಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ನ್ಯೂಜಿಲೆಂಡ್ನ ಸಂಸದೆ ಜೂಲಿ ಅನ್ನೆ ಜೆಂಟರ್ ಅವರಿಗೆ ಭಾನುವಾರ ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಗೆ ತಲುಪಿ 1 ಗಂಟೆಯ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ವಿಚಾರವನ್ನು ಸಂಸದೆ ಜೂಲಿ ಅನ್ನೆ ಜೆಂಟರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಬೆಳಗ್ಗೆ 3.04 ಗಂಟೆಗೆ ಸರಿಯಾಗಿ ನಮ್ಮ ಕುಟುಂಬಕ್ಕೆ ಹೊಸ ಸದಸ್ಯರನ್ನು ಆಹ್ವಾನಿಸಿಕೊಂಡೆವು. ಹೆರಿಗೆ ಆಸ್ಪತ್ರೆಗೆ ಸೈಕಲ್ನಲ್ಲಿ ಬರುವ ಬಗ್ಗೆ ಮೊದಲೇ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ, ಕೊನೆಗೆ ಸೈಕಲ್ನಲ್ಲಿ ಆಸ್ಪತ್ರೆಗೆ ಬಂದೆ” ಎಂದು ಬರೆದುಕೊಂಡಿದ್ದಾರೆ.
“ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಮನೆಯಿಂದ ಹೊರಟ ವೇಳೆ ಹೆಚ್ಚು ನೋವು ಇರಲಿಲ್ಲ. ಸೈಕಲ್ ಏರಿ ಆಸ್ಪತ್ರೆಗೆ ಹೊರಟಿದ್ದು, 10 ನಿಮಿಷದೊಳಗೆ ಆಸ್ಪತ್ರೆಗೆ ತಲುಪಿದೆವು. ಆರೋಗ್ಯಕರ ಹೆರಿಗೆಗೆ ಸಹಕರಿಸಿದ ಆಸ್ಪತ್ರೆಯ ತಂಡಕ್ಕೆ ಧನ್ಯವಾದ” ಎಂದು ಅವರು ಹೇಳಿದ್ದಾರೆ.
ಅಂದ ಹಾಗೆ ಜೂಲಿ ಅನ್ನೆ ಜೆಂಟರ್ ಸೈಕಲ್ ಏರಿ ಆಸ್ಪತ್ರೆಗೆ ಬಂದು ಮಗುವಿಗೆ ಜನ್ಮ ನೀಡಿರುವುದು ಇದು ಎರಡನೇ ಬಾರಿ. ಈ ಹಿಂದೆಯೂ ಮೊದಲ ಮಗುವಿಗೆ ಜನ್ಮ ನೀಡುವ ಸಮಯದಲ್ಲೂ ಇದೆ ರೀತಿ ಸೈಕಲ್ ನಲ್ಲೆ ಆಸ್ಪತ್ರೆಗೆ ಬಂದಿದ್ದರು ಎಂಬುದು ಗಮನಾರ್ಹ.