ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ | ರಸಿಕ ಕುಷ್ಠ-ರತ್ನಾಕರಗೆ ಜಾಮೀನು !

ಮಂಗಳೂರು : ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದ ದ.ಕ. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ರತ್ನಾಕರ್‌ಗೆ ಮೂರನೇ ಜೆಎಂಎಫ್‌ಸಿ ನ್ಯಾಯಾಲಯವು ಸೋಮವಾರ ಜಾಮೀನು ನೀಡಿದೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಜಿಲ್ಲಾ ಆಯುಷ್ಮಾನ್ ನೋಡಲ್ ಅಧಿಕಾರಿ, ಕುಷ್ಠರೋಗ ನಿವಾರಣಾ ವಿಭಾಗದ ಅಧಿಕಾರಿಯೂ ಆಗಿದ್ದ ಡಾ. ರತ್ನಾಕರ್ ಕೆಲವು ತಿಂಗಳ ಹಿಂದೆ ಸರಕಾರಿ ಕಚೇರಿಯಲ್ಲೇ ಸುಮಾರು 9 ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು.ಅದರಂತೆ ಪೊಲೀಸರು ಶುಕ್ರವಾರ ಡಾ.ರತ್ನಾಕರ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರಲ್ಲದೆ, ಹೆಚ್ಚುವರಿ ವಿಚಾರಣೆಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ಕೋರಿದ್ದರು. ನ್ಯಾಯಾಲಯವು ಎರಡು ದಿನ ಆರೋಪಿ ಡಾ.ರತ್ನಾಕರ್ ನನ್ನು ಪೊಲೀಸ್ ಕಸ್ಟಡಿಗೆ ನೀಡಿತ್ತು. ಪೊಲೀಸ್ ಕಸ್ಟಡಿಯ ಅವಧಿಯು ಸೋಮವಾರಕ್ಕೆ ಮುಗಿದ ಕಾರಣ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆ ಬಳಿಕ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.ಡಾ. ರತ್ನಾಕರ್ ಕಚೇಷ್ಠೆಯ ಬಗ್ಗೆ ಬಂದ ದೂರನ್ನು ಆಧರಿಸಿ ದ.ಕ. ಜಿಲ್ಲಾಧಿಕಾರಿಯು ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಮಟ್ಟದ ದೂರು ಸಮಿತಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಸಮಿತಿಯು ನೀಡಿದ ವರದಿಯನ್ನು ಸರಕಾರಕ್ಕೂ ಸಲ್ಲಿಸಲಾಗಿತ್ತು. ಅಲ್ಲದೆ ನ.8ರಿಂದ ಅನ್ವಯವಾಗುವಂತೆ ಅಮಾನತಿನಲ್ಲಿರಿಸಲಾಗಿತ್ತು. ಆ ಬಳಿಕ ಲೈಂಗಿಕ ಕಿರುಕುಳದ ವೀಡಿಯೋಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲದೆ ಸಂತ್ರಸ್ತ ಯುವತಿಯರ ಪರವಾಗಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಮಹಿಳೆಯೊಬ್ಬರು ಮಹಿಳಾ ಠಾಣೆಗೆ ದೂರು ನೀಡಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಅದರಂತೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರೂ ಇದೀಗ ನಾಲ್ವೇ ದಿನದಲ್ಲಿ ಜಾಮೀನು ಲಭಿಸಿದೆ.

Leave A Reply

Your email address will not be published.