ಸುಳ್ಯ, ಎಸ್ಡಿಪಿಐ ಯಿಂದ ಸಂವಿಧಾನ ದೀಕ್ಷೆ ಕಾರ್ಯಕ್ರಮ
ಸುಳ್ಯ, ನ 26:- ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಸಮಿತಿ ವತಿಯಿಂದ ದೇಶದ ಜಾತ್ಯಾತೀತ ಮಾನವ ಹಕ್ಕು ಪ್ರಜಾಪ್ರಭುತ್ವ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಸಂವಿಧಾನ ದೀಕ್ಷೆ ಕಾರ್ಯಕ್ರಮವನ್ನು ತಹಶಿಲ್ದಾರರ ಕಚೇರಿ ಮುಂಭಾಗ ನಡೆಸಲಾಯಿತು.
ಎಸ್ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ ಸಂವಿಧಾನ ಪೀಠಿಕೆ ಓದಿಸುವ ಮೂಲಕ ಸಂವಿಧಾನ ಪ್ರತಿಜ್ಞಾವಿಧಿ ಗೈದರು.
ನಂತರ ಮಾತನಾಡಿದ ಅವರು 1949 ನವೆಂಬರ್ 26 ರಂದು ಬಾಬ ಸಾಹೇಬ್ ಅಂಬೇಡ್ಕರ್ ಸಂವಿಧಾನವನ್ನು ಅಂದಿನ ಒಕ್ಕೂಟ ಸರ್ಕಾರಕ್ಕೆ ಸಮರ್ಪಿಸಿದರು. ಈ ಐತಿಹಾಸಿಕ ದಿನದ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಭಾರತದ ಪ್ರಜಾಪ್ರಭುತ್ವವು ಸಂವಿಧಾನದ ಅಡಿಪಾಯದ ಮೇಲೆ ನಿಂತಿದೆ. ಸಂವಿಧಾನ ಶಿಲ್ಪಿ,ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಸತತ ಅಧ್ಯಯನ ಮಾಡಿ ತಾವು ಉಂಡ ನೋವು, ಕಂಡ ಸಂಕಷ್ಟಗಳ ಅನುಭವದ ಆಧಾರದ ಮೇಲೆ ಹಾಗೂ ಜಗತ್ತಿನ ಅನೇಕ ಕಾನೂನುಗಳನ್ನು ಓದಿ,ಅರಿತು, ಅವಲೋಕನ ನಡೆಸಿ ಸರ್ವರಿಗೂ ಸಮಪಾಲು ಸಮ ಬಾಳು ಸಿಗಲಿ ಎಂಬ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಭಾರತದ ಈ ಸಂವಿಧಾನವನ್ನು ರಚಿಸಲಾಗಿದೆ. ಇಂತಹ ಅಭೂತಪೂರ್ವ ಸಂವಿಧಾನ ಯಥಾವತ್ತಾಗಿ ಜಾರಿಯಾದರೆ ಮಾತ್ರ ಈ ದೇಶ ಹಸಿವು ಮತ್ತು ಭಯ ಮುಕ್ತ ಆಗುತ್ತೆ. ಆದುದರಿಂದ ಸಂವಿಧಾನದ ಯತ್ತಾವತ್ ಜಾರಿಗಾಗಿ ಎಸ್.ಡಿ.ಪಿ.ಐ ತನ್ನ ಹೋರಾಟ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಿದೆ.
ಭಾರತದ ಭದ್ರಕೋಟೆಯಂತೆ ಇರುವ ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಖಂಡಿತವಾಗಿಯೂ ಮನುವಾದವನ್ನು ಸೋಲಿಸಿ ಸಂವಿಧಾನವನ್ನು ಗೆಲ್ಲಿಸುತ್ತೇವೆ ಎಂದು ನಾವೆಲ್ಲರೂ ಈ ದಿವಸ ಪ್ರತಿಜ್ಞೆ ಮಾಡ ಬೇಕು ಎಂದರು.
ವಿಧಾನಸಭಾ ಉಪಾಧ್ಯಕ್ಷ ಬಾಬು ಎನ್ ಸವಣೂರು ಮಾತನಾಡಿ ಸಂವಿಧಾನದಲ್ಲಿ ರಾಷ್ಟ್ರ ಪ್ರೇಮವಿದೆ. ಸಮಾನತೆಯಿದೆ, ಸಾರಭೌಮತೆ, ಭಾತೃತ್ವವಿದೆ, ಐಕ್ಯತೆಯಿದೆ ಇವುಗಳು ಇರುವುದರಿಂದಲೇ ಮನುವಾದಿಗಳಿಗೆ ಹೊಟ್ಟೆ ಹುರಿ ಮತ್ತು ಭಯ ಎಂದರು.ಸಂವಿಧಾನ ಸರಿಯಾಗಿ ಜಾರಿಯಾಗಬೇಕೆಂದರೆ ಮನುವಾದಿಗಳು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಹೇಳಿದರು.
ಭಾರತಕ್ಕೆ ಬೇಕಾಗಿರುವುದು ಅಂಬೇಡ್ಕರ್ ಸಂವಿಧಾನವೇ ಹೊರತು ಮನುಧರ್ಮವಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಶ್ರಫ್ ಟರ್ಲಿ,ಅಬ್ದುಲ್ ರಹ್ಮಾನ್ ಅಡ್ಕಾರ್, ಸಿದ್ದೀಕ್ ಕೋಡಿಯೆಮ್ಮೆ,ಸುಳ್ಯ ಬ್ಲಾಕ್ ಅಧ್ಯಕ್ಷ ಆಬಿದ್ ಪೈಚಾರ್, ಕಾರ್ಯದರ್ಶಿ ಫಾರೂಕ್ ಕಾನಕ್ಕೋಡ್,ಬೆಳ್ಳಾರೆ ವಲಯಾಧ್ಯಕ್ಷರಾದ ಸಿದ್ದೀಕ್ ಬೆಳ್ಳಾರೆ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು
ಸುಳ್ಯ ವಿಧಾನಸಭಾ ಜೊತೆ ಕಾರ್ಯದರ್ಶಿ ಉವೈಸ್ ವಂದಿಸಿ , ನಗರ ಕಾರ್ಯದರ್ಶಿ ಸಾಜಿದ್ ಬೋರುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು