ಚಿಕ್ಕಮಗಳೂರು : ದೇವಸ್ಥಾನಕ್ಕೆ ಭಿಕ್ಷುಕಿಯಾಗಿ ಎಂಟ್ರಿ ಆದವಳು ಜನರಿಂದ ಸೆಲ್ಫಿ ತೆಗೆದುಕೊಳ್ಳುವ ಹಾಗಾದಳು!!
ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಡೂರು ಆಂಜನೇಯ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನ ದಿನ ಬೆನ್ನು ಬಗ್ಗಿದ ಭಿಕ್ಷುಕಿಯೊಬ್ಬರು ಕುಂಟುತ್ತಾ ದೇವಸ್ಥಾನದ ಒಳಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಆಕೆ ಇಲ್ಲಿನ ಅಧ್ಯಕ್ಷರು ಎಲ್ಲಿ, ಅಧ್ಯಕ್ಷರು ಎಲ್ಲಿ ಎಂದು ಹುಡುಕುತ್ತಿದ್ದಳು.
ಅಲ್ಲಿದ್ದವರೆಲ್ಲ ಆಕೆ ಭಿಕ್ಷೆ ಕೇಳುವುದಕ್ಕೆ ಎಂದು ಭಾವಿಸಿ ಆಕೆಗೆ ಬೈದು ಕಳುಹಿಸುತ್ತಿದ್ದರು. ಆದರೆ ಕೊನೆಗೆ ಆಕೆ ಅಧ್ಯಕ್ಷ ಸಿಗಲಿಲ್ಲ ಎಂದು ಸೀದಾ ದೇವಸ್ಥಾನದ ಒಳಗೆ ಹೋಗಿ ಅಲ್ಲಿದ್ದ ಸ್ವಾಮೀಜಿ ಒಬ್ಬರ ಬಳಿ ಸಾಗಿ, ತನ್ನ ಮುದುರಿದ ಸೆರಗಿನಿಂದ 500 ಮುಖ ಬೆಲೆಯ 20 ನೋಟುಗಳನ್ನು ತನ್ನ ನಡುಗುವ ಕೈಗಳಿಂದ ನೀಡಿ ಆಂಜನೇಯನಿಗೆ ಬೆಳ್ಳಿ ಮುಖವಾಡ ಮಾಡಿಸಿ ಎಂದು ಮನವಿ ಮಾಡಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ನಿನ್ನೆ ಜಿಲ್ಲೆಯ ಕಡೂರು ಪಟ್ಟಣದ ಕೋಟೆ ಪಾತಾಳಾಂಜನೇಯ ಸ್ವಾಮಿ ದೇಗುಲದ ಪುನರ್ ಪ್ರತಿಷ್ಠಾಪನ ಮಹೋತ್ಸವ ನಡೆಯಿತು. ಈ ವೇಳೆ ಭಿಕ್ಷುಕಿಯೊಬ್ಬರು ದೇವಸ್ಥಾನಕ್ಕೆ ತಾನು ಭಿಕ್ಷೆ ಬೇಡಿ ಗಳಿಸಿದ 10 ಸಾವಿರ ದೇಣಿಗೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ದೇವಸ್ಥಾನಕ್ಕೆ ದೇಣಿಗೆ ನೀಡಿದ 80 ವರ್ಷ ಪ್ರಾಯದ ಭಿಕ್ಷುಕಿ ಹೆಸರು ಕೆಂಪಜ್ಜಿ ಕಡೂರು ಪಟ್ಟಣದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ವೃದ್ಧೆ. ಆಂಜನೇಯ ಸ್ವಾಮಿಯ ದೇಗುಲದ ಕಾರ್ಯಕ್ರಮದ ವೇಳೆ ಹೊರಗೆ ಕುಳಿತಿದ್ದ ಅಜ್ಜಿ ಹೋಗಿ-ಬರುವವರನ್ನೆಲ್ಲಾ ಅಧ್ಯಕ್ಷರು ಎಲ್ಲಿ ಎಂದು ಕೇಳುತ್ತಿದ್ದಳು. ಹಣ ಕೇಳಲು ಎಂದೇ ತಿಳಿದು ಎಲ್ಲರೂ ವೃದ್ಧೆಯನ್ನು ದೂರ ಹೋಗಲು ಹೇಳುತ್ತಿದ್ದರು. ಆದರೆ, ಆ ಭಿಕ್ಷುಕಿ ನೇರವಾಗಿ ದೇಗುಲದೊಳಗೆ ಹೋಗಿ ಅಲ್ಲಿದ್ದ ದತ್ತ ವಾಸುದೇವ ಸ್ವಾಮೀಜಿಗೆ 500 ಮುಖಬೆಲೆಯ 20 ನೋಟುಗಳನ್ನು ಕಾಣಿಕೆ ಎಂದು ನೀಡಿದಾಗ ಎಲ್ಲರಿಗೂ ಆಶ್ಚರ್ಯ. ಮೂಕವಿಸ್ಮಿತರಾಗಿ ನಿಂತರು. ಕೆಂಪಜ್ಜಿಯ ದೊಡ್ಡತನಕ್ಕೆ ಎಲ್ಲರಿಂದಲೂ ವ್ಯಾಪಕ ಮೆಚ್ಚುಗೆ ದೊರೆಯಿತು.
ಕೆಂಪಜ್ಜಿ 2019ರಲ್ಲಿ ಪಾತಾಳಾಂಜನೇಯ ದೇಗುಲ ಜೀರ್ಣೋದ್ಧಾರ ಆರಂಭವಾದಾಗಲೂ ಹತ್ತು ಸಾವಿರ ನೀಡಿದ್ದರಂತೆ. ಪಟ್ಟಣದ ಸಾಯಿಬಾಬಾ ದೇವಾಲಯದ ಬಳಿ ಭಿಕ್ಷೆ ಬೇಡುವ ಕೆಂಪಜ್ಜಿಗೆ ಅಲ್ಲಿನ ಪಟ್ಟಣದ ವಿನಾಯಕ ಹೋಟೆಲ್ ಮಾಲೀಕ ಭಾಸ್ಕರ್ ಪ್ರತಿದಿನ ತಿಂಡಿ-ಊಟ ನೀಡುತ್ತಾರೆ. ಅಜ್ಜಿಗೆ ಆರೋಗ್ಯ ಸಮಸ್ಯೆಯಾದಾಗಲೂ ಇದೇ ಭಾಸ್ಕರ್ ಚಿಕಿತ್ಸೆ ಕೊಡಿಸುತ್ತಾರೆ. ದೇಗುಲಕ್ಕೆ ಸಾವಿರಾರು ಜನ ಲಕ್ಷಾಂತರ ಹಣ ನೀಡಬಹುದು. ಆದರೆ, ಈ 10 ಸಾವಿರ ತುಂಬಾ ಮೌಲ್ಯಯುತವಾದದ್ದು ಎಂದು ಭಕ್ತರು ಮತ್ತು ಅಲ್ಲಿನ ಆಡಳಿತ.ಮಂಡಳಿ ಭಾವಿಸಿದ್ದಾರೆ. ತಾನು ನೀಡಿದ 10 ಸಾವಿರ ಹಣದಲ್ಲಿ ಆಂಜನೇಯ ಸ್ವಾಮಿಗೆ ಬೆಳ್ಳಿ ಮುಖವಾಡ ಮಾಡಿಸಿ ಹಾಕಬೇಕೆಂದು ಕೆಂಪಜ್ಜಿ ಬೇಡಿಕೊಂಡಿದ್ದಾಳೆ. ಆರಂಭದಲ್ಲಿ ಭಿಕ್ಷುಕಿಗೆ ಬೈತಿದ್ದ ಜನ ಕೊನೆಗೆ ಆಕೆ ಜೊತೆಯೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಖಷಿಪಟ್ಟಿದ್ದಾರೆ. ಈಗ ಕೆಂಪಜ್ಜಿ ಕಡೂರಿನಲ್ಲಿ ಆಕೆಯ ದಾನದಿಂದ ಫುಲ್ ಫೇಮಸ್ ಆಗಿದ್ದಾರೆ.