ಪುತ್ತೂರು: ಜಮೀನು ನೋಡಲು ಬಂದ ಫೊಟೋಗ್ರಾಫರ್ ಹತ್ಯೆ | ಯಾಕೆ ಕೊಲೆ ಮಾಡಿದ್ರು..? ಒಬ್ಬರೇ ಬರುವಂತೆ ಹೇಳಿ ಕಥೆ ಮುಗಿಸಿದಾದ್ದರೂ ಯಾಕೆ?
ಪುತ್ತೂರು: ಕೆಲದ ದಿನಗಳ ಹಿಂದೆ ತನ್ನ ಜಮೀನು ನೋಡಲೆಂದು ಬಂದು ನಾಪತ್ತೆಯಾಗಿದ್ದ ಫೋಟೋಗ್ರಾಫರ್ ಅವರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಜಮೀನಿನ ವಿಚಾರಕ್ಕೆ ಸಂಬಂಧಿಸಿ ಸಂಬಂಧಿಕರೇ ಸುತ್ತಿಗೆಯಲ್ಲಿ ತಲೆಗೆ ಒಡೆದು ಕೊಲೆ ನಡೆಸಿ ಕಾಡಿನೊಳಗೆ ಹೂತಿಟ್ಟ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿತ್ತು.
ಈ ಘಟನೆಯ ವಿವರ ಹೀಗಿದೆ..
ಮಂಗಳೂರಿನ ಕಾವೂರು ನಿವಾಸಿ, ಪ್ರಸ್ತುತ ಮೈಸೂರಿನ ಸುಬ್ರಹ್ಮಣ್ಯ ನಗರದ ನಿವಾಸಿ ಫೋಟೋಗ್ರಾಫರ್ ಜಗದೀಶ್ (58) ಕೊಲೆಯಾದವರು. ಪಡವನ್ನೂರು ಪಟ್ಲಡ್ಕದ ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ, ಪತ್ನಿ ಜಯಲಕ್ಷ್ಮೀ, ಪುತ್ರ ಪ್ರಶಾಂತ್ ಹಾಗೂ ನೆರೆಮನೆಯ ನಿವಾಸಿ ಜೀವನ್ ಪ್ರಸಾದ್ನನ್ನು ಕೊಲೆ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರದಲ್ಲಿ ಫೋಟೋಗ್ರಾಫರ್ ಆಗಿದ್ದ ಮಂಗಳೂರು ಮೂಲದ ಜಗದೀಶ್ ತನ್ನ ಪತ್ನಿ, ಮಗನೊಂದಿಗೆ ಮೈಸೂರಿನಲ್ಲಿ ವಾಸ್ತವ್ಯ ಹೊಂದಿದ್ದರು. ತಿಂಗಳಿಗೊಮ್ಮೆ ಪುತ್ತೂರು ಆರ್ಯಾಪು ಗ್ರಾಮದ ಕುಂಜೂರುಪಂಜದಲ್ಲಿರುವ ಕೃಷಿ ಜಮೀನನ್ನು ನೋಡಲು ಬರುತ್ತಿದ್ದು, ನ. 18ರಂದು ಮೈಸೂರಿನಿಂದ ಬೆಳಗ್ಗೆ ಪುತೂರು ಕುಂಜೂರು ಪಂಜದ ಕೃಷಿ ಜಮೀನಿಗೆ ಬಂದಿದ್ದರು. ಬಳಿಕ ಮೈಸೂರಿಗೆ ತಲುಪದೆ ನಾಪತ್ತೆ ಯಾಗಿರುವ ಬಗ್ಗೆ ಅವರ ಸಹೋದರ ಶಶಿಧರ ಸಂಪ್ಯ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ ಅವರ ಸಂಬಂಧಿಕರಾಗಿದ್ದ ಜಗದೀಶ್ ಅವರೊಂದಿಗಿನ ಜಾಗದ ವ್ಯವಹಾರವೇ ಕೊಲೆಗೆ ಹೇತು ಎನ್ನುವುದು ಮೇಲ್ನೊಟಕ್ಕೆ ಕಂಡು ಬಂದಿದೆ. ಜಗದೀಶ್ ಅವರಿಗೆ ಸಂಬಂಧದ ನೆಲೆಯಲ್ಲಿ ಮಾವನಾಗಿದ್ದ ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ ಅವರ ಮೂಲಕ ಜಾಗ ಖರೀದಿಸಲೆಂದು 65 ಲಕ್ಷ ರೂ. ನೀಡಿದ್ದು ಪುತ್ತೂರಿನ ಕುಂಜೂರುಪಂಜದಲ್ಲಿ, ಪುಳಿತ್ತಡಿಯಲ್ಲಿ ಜಾಗ ಖರೀದಿಸಲಾಗಿತ್ತು. ಈ ಜಾಗವನ್ನು ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ ಅವರು ನೋಡಿಕೊಳ್ಳುತ್ತಿದ್ದರು. ಆದರೆ ಜಾಗದ ದಾಖಲೆಗಳೆಲ್ಲವೂ ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ ಅವರ ಹೆಸರಿನಲ್ಲಿ ಮಾಡಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಇಬ್ಬರ ನಡುವೆ ಅಸಮಧಾನ ಮೂಡಿತ್ತು. ಕೆಲ ಸಮಯಗಳ ಹಿಂದೆ ಪುಳಿತ್ತಡಿಯ ಜಾಗವನ್ನು ಜಗದೀಶ್ ಅವರ ಗಮನಕ್ಕೆ ತಾರದೆ ಮಾರಾಟ ಮಾಡಿದ್ದು, ಸಂಘರ್ಷ ತಾರಕಕ್ಕೆ ಏರಲು ಕಾರಣ ಎನ್ನಲಾಗಿದೆ. ಈ ಬಗ್ಗೆ ನ. 18ರಂದು ಮಾವ ಬಾಲಕೃಷ್ಣ ರೈ ಅವರೊಂದಿಗೆ ಕುಂಜೂರುಪಂಜದಲ್ಲಿನ ಜಾಗ ವೀಕ್ಷಿಸಿ ಆಮ್ನಿಯಲ್ಲಿ ಪಟ್ಲಡ್ಕಕ್ಕೆ ಬಂದಿದ್ದ ವೇಳೆ ಇಬ್ಬರೊಳಗೆ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದೆ. ಪ್ರತೀ ಬಾರಿ ಜಾಗ ನೋಡಲು ಬರುವಾಗ ಪತ್ನಿಯನ್ನು ಕರೆದುಕೊಂಡು ಬರುತ್ತಿದ್ದರು. ಈ ಬಾರಿ ಪತ್ನಿ ಬಂದಿರಲಿಲ್ಲ.
ಸುತ್ತಿಗೆಯಲ್ಲಿ ಜಗದೀಶ್ ಅವರ ತಲೆಗೆ ಬಡಿದ ವೇಳೆ ಸ್ಥಳದಲ್ಲೇ ಮೃತಪಟ್ಟಿದ್ದು ಬಳಿಕ ಮೂವರು ಆರೋಪಿಗಳು ಸೇರಿ ಮೃತದೇಹವನ್ನು ಸಮೀಪದ ಮಗುಳಿ ರಕ್ಷಿತಾರಣ್ಯದಲ್ಲಿ ಹೂತಿಟ್ಟಿದ್ದರು. ಹೂತಿಟ್ಟ ಕಾಡು ಅವರ ಮನೆಯಿಂದ ಕೇವಲ 300 ಮೀ. ದೂರವಿತ್ತು. ಪೊಲೀಸರು ನಾಪತ್ತೆ ಪ್ರಕರಣ ಬೆನ್ನಟ್ಟಿದ್ದ ಸಂದರ್ಭ ಈ ಅಂಶ ಬೆಳಕಿಗೆ ಬಂದಿದ್ದು ನ. 24 ರಂದು ಹೂತಿಟ್ಟ ಸ್ಥಳದಿಂದ ಮೃತದೇಹ ಹೊರ ತೆಗೆದು ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.
ಸುಳ್ಯದ ಮೂವರ ವಶ
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಸುಳ್ಯದ ಹಳೆಗೇಟಿನ ಸಮೀಪದ ಮೂವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ನಾಪತ್ತೆ ಎಂದು ಕಥೆ ಕಟ್ಟಿದ್ದರು
ನ. 18ರಂದು ಕುಂಜೂರುಪಂಜದಲ್ಲಿ ಜಾಗ ನೋಡಿದ ಜಗದೀಶ್ ಬಳಿಕ ಮಧ್ಯಾಹ್ನ ಪುತ್ತೂರಿಗೆ ಬಂದು, ಸಂಜೆ ಪುಳಿತ್ತಡಿಗೆ ತೆರಳಿ ಅಲ್ಲಿಂದ ಮೈಸೂರಿಗೆ ಹೋಗಲೆಂದು ಆಮ್ನಿ ಕಾರಿನಲ್ಲಿ ಸುಳ್ಯ ತನಕ ತೆರಳಿದ್ದರು. ಅಲ್ಲಿಂದ ಬಸ್ನಲ್ಲಿ ಮೈಸೂರಿಗೆ ಹೋಗುವುದಾಗಿ ಹೇಳಿದ್ದರು ಎನ್ನುವ ಕಥೆ ಕಟ್ಟಲಾಗಿತ್ತು. ಆದರೆ ವಾಸ್ತವವಾಗಿ ಜಗದೀಶ್ ಪಟ್ಲಡ್ಕಕ್ಕೆ ಹೋದವರು ಅಲ್ಲೇ ಕೊಲೆಯಾಗಿದ್ದರು. ಅವರ ಪತ್ನಿ ಶರ್ಮಿಳಾ ನ. 19ರ ನಸುಕಿನ ಜಾವ ಜಗದೀಶ್ ಅವರಿಗೆ ಕರೆ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು. ಈ ನಿಟ್ಟಿನಲ್ಲಿ ಅವರು ಮನೆ ಮಂದಿಗೆ ಗಂಡ ನಾಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದರು.