ಮೊಬೈಲ್ ಕೊಳ್ಳಲು ತಕ್ಷಣಕ್ಕೆ ಹಣ ಬೇಕಿತ್ತು | ಸಾಕಿದ ತಾತನನ್ನೇ ಇಲ್ಲವಾಗಿಸಿದ ಪಾಪಿ ಮೊಮ್ಮಗ!
ರಾಯಚೂರು: ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ನವೆಂಬರ್ 21 ರಂದು ನಡೆದಿದ್ದ ಕೊಲೆ ಪ್ರಕರಣವನ್ನು 40 ಗಂಟೆಯೊಳಗೆ ಭೇದಿಸಿರುವ ಪೊಲೀಸರು, ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸುವುದರೊಂದಿಗೆ ತಾತನನ್ನು ಕೊಲೆಮಾಡಿದ ಪಾಪಿ ಮೊಮ್ಮಗನ ಹೀನಕೃತ್ಯ ಬಯಲಾಗಿದೆ.
ನಿವೃತ್ತ ಶಿರಸ್ತೇದಾರ ಪಂಪಾಪತಿ (77) ಕೊಲೆಯಾದ ವ್ಯಕ್ತಿ. ಮೃತರ ಅಣ್ಣನ ಮೊಮ್ಮಗ ಹಾಗೂ ಆತನ ಸ್ನೇಹಿತ ಹಣಕ್ಕಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಹಣ, ಒಡವೆಗಳಿಗಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಾದ ಅಖಿಲೇಶ್ ಹಾಗೂ ಗೌತಮ್ ಬಂಧಿಸಲಾಗಿದೆ. ಮೊಬೈಲ್ ಕೊಳ್ಳಲು ಹಣಕ್ಕಾಗಿ ಒತ್ತಾಯಿಸಿ ಹಣ ಕೊಡದಿದ್ದಕ್ಕೆ ಕಳ್ಳತನ ಮಾಡಿದ್ದರು. ಕಳ್ಳತನಕ್ಕೆ ಅಡ್ಡಿಪಡಿಸಿದ್ದಕ್ಕೆ ಕೊಲೆ ಮಾಡಿ ಪರಾರಿಯಾಗಿದ್ದರು. 50 ಸಾವಿರ ರೂ. ನಗದು, 1 ಲಕ್ಷ 23 ಸಾವಿರ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಅಖಿಲೇಶ್ ಕೊಲೆಯಾದ ಪಂಪಾಪತಿಯ ಅಣ್ಣನ ಮೊಮ್ಮಗ. ಎರಡನೇ ಆರೋಪಿ ಪ್ಯಾರಾಮೆಡಿಕಲ್ ವಿದ್ಯಾರ್ಥಿ ಗೌತಮ್ ಅಖಿಲೇಶನ ಸ್ನೇಹಿತ. ಆರೋಪಿಗಳಿಬ್ಬರು ರಾಯಚೂರಿನ ರಾಂಪೂರ ನಿವಾಸಿಗಳಾಗಿದ್ದಾರೆ. ಸ್ವಂತ ಮಕ್ಕಳಿಲ್ಲದ ಪಂಪಾಪತಿ ಪತ್ನಿ ಜೊತೆ ನಿಜಲಿಂಗಪ್ಪ ಕಾಲೋನಿಯಲ್ಲಿ ವಾಸವಾಗಿದ್ದರು. ಸಂಬಂಧದಲ್ಲಿ ಮೊಮ್ಮಗನಾಗಿದ್ದ ಅಖಿಲೇಶ್ ಪಂಪಾಪತಿಯೊಂದಿಗೆ ಉತ್ತಮ ಒಡನಾಟ ಹೊಂದಿದ್ದ. ಆದರೆ ಹಣಕ್ಕಾಗಿ ಸ್ನೇಹಿತನ ಜೊತೆಗೂಡಿ ತಾತನನ್ನೇ ಕೊಲೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಈ ಸಂಬಂಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಪ್ರಕರಣ ತನಿಖೆಗೆ ಡಿವೈಎಸ್‌ಪಿ ಶಿವನಗೌಡ ಪಾಟೀಲ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಬಂಧಿತರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.