ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಭತ್ತ ಕಟಾವು ಕಾರ್ಯಕ್ರಮ
ಪುತ್ತೂರು: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಭೂಮಿಯನ್ನು ತಾಯಿ ಎಂದು ಗೌರವಿಸಿ ಕೃಷಿ ಉತ್ಪನ್ನಗಳ ಮೇಲೆ ಬದುಕಬೇಕೆಂದು ಕನಸು ಕಟ್ಟಿಗೊಂಡಿರುವ ರಾಷ್ಟ್ರವಾಗಿದೆ. ಶಿಕ್ಷಣ ಪಡೆದು ಪೇಟೆಗಳತ್ತ ಮುಖ ಮಾಡುವ ಬದಲು ಕೃಷಿ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಹೇಳಿದರು.
ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಭತ್ತ ಕಟಾವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೇಸಾಯ ಪದ್ಧತಿ ಹಳ್ಳಿಗಳಲ್ಲಿ ಮರೆಯಾಗುತ್ತಿದ್ದು, ಇಂತಹ ಕಾಲ ಘಟ್ಟದಲ್ಲಿ ಗದ್ದೆಕೃಷಿಯಲ್ಲಿ ತೊಡಗಿಸಿಕೊಂಡು ಇನ್ನು ಜೀವಂತವಾಗಿಸಿ ಕೊಂಡಿರಬೇಕಾದುದು ಅತ್ಯಗತ್ಯ. ಯಾವುದೇ ಆರ್ಥಿಕ ಲಾಭದ ಉದ್ದೇಶದಿಂದ ಮಾಡದೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಜೀವನಪಾಠದ ಸಲುವಾಗಿ ಗದ್ದೆ ಬೇಸಾಯವನ್ನು ಕೊರೊನಾ ಕಾಲದಲ್ಲಿ ಆರಂಭಿಸಲಾಯಿತು. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಉಚಿತ ಮಧ್ಯಾಹ್ನದ ಊಟಕ್ಕೆ ಈ ಕಟಾವು ಮಾಡಿದ ಭತ್ತವು ಸಹಕಾರಿಯಾಗಲಿದೆ ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಕೃಷ್ಣ ಪ್ರಸಾದ ನಡುಸಾರು ಮಾತನಾಡಿ ಹೊಸತಾಗಿ ಆರಂಭಿಸಿದ ಗದ್ದೆ ಬೇಸಾಯದ ಯೋಜನೆ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಶುಭ ಹಾರೈಸಿದರು.
ವಿವೇಕಾನಂದ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್,ಎಸ್), ರೆಡ್ ಕ್ರಾಸ್ , ರೋವರ್-ರೇಂಜರ್, ಐಕ್ಯೂಎಸಿ ಮತ್ತು ಪಿಯುಸಿ ವಿಭಾಗದ ವಿದ್ಯಾರ್ಥಿಗಳು ಭತ್ತ ಕಟಾವು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಡಾ. ಕೃಷ್ಣ ಪ್ರಸನ್ನ, ಕೆ. ಎನ್ ಸುಬ್ರಹ್ಮಣ್ಯ, ವತ್ಸಲಾ ರಾಜ್ಞಿ, ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಹೇಶ ನಿಟಿಲಾಪುರ, ಗದ್ದೆ ಕೃಷಿ ಕಾರ್ಯಕ್ರಮದ ಮುಖ್ಯ ಸಂಯೋಜಕ ಜಯಗೋವಿಂದ ಶರ್ಮ ಉಪಸ್ಥಿತರಿದ್ದರು. ಉಪನ್ಯಾಸಕ ವಿಘ್ನೇಶ ವೈ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.