ಕೆಎಸ್ಆರ್ ಟಿಸಿ ಮಹಿಳಾ ನೌಕರರಿಗೆ ಗುಡ್ ನ್ಯೂಸ್ | ಮಗು ದತ್ತು ಪಡೆದರೂ ಇನ್ನು ಮುಂದೆ ಸಿಗಲಿದೆ 180 ದಿನಗಳ ಪ್ರಸೂತಿ ರಜೆ!!
ಕೆಎಸ್ಆರ್ ಟಿಸಿ ಮಹಿಳಾ ಸಿಬ್ಬಂದಿಗಳಿಗೆ ಸುದ್ದಿಯೊಂದಿದೆ. ಇದುವರೆಗೆ ರಾಜ್ಯ ಸರ್ಕಾರದಿಂದ ಕೇವಲ ಪ್ರಸೂತಿ ರಜೆಯಾಗಿ ಮಹಿಳಾ ಉದ್ಯೋಗಿಗಳಿಗೆ 180 ದಿನಗಳನ್ನು ನೀಡಲಾಗುತ್ತಿತ್ತು. ಇದೀಗ ಕೆಎಸ್ಆರ್ ಟಿಸಿ ಯಲ್ಲಿನ ಮಹಿಳಾ ನೌಕರರು ಮಗುವನ್ನು ದತ್ತು ಪಡೆದಾಗಲೂ 180 ದಿನಗಳ ರಜೆ ಪ್ರಸೂತಿ ರಜೆಯ ಮಾದರಿಯಲ್ಲೇ ಸಿಗಲಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದಂತ ಶಿವಯೋಗಿ ಸಿ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ರಾಜ್ಯ ಸರ್ಕಾರವು ನಿಗಮದ ಮಹಿಳಾ ಉದ್ಯೋಗಿಗಳಿಗೆ ಮಗು ದತ್ತು ಪಡೆದ ದಿನಾಂಕದಿಂದ ಒಂದು ವರ್ಷ ಇಲ್ಲವೇ, ಮಗುವಿಗೆ ಒಂದು ವರ್ಷ ತಲುಪೋವರೆಗೆ ರಜಾ ಅವರ ಖಾತೆಯಲ್ಲಿರೋ ರಜೆ ಹಾಗೂ ಅಗತ್ಯವಿದ್ದಲ್ಲಿ ಖಾತೆಯಲ್ಲಿ ಇಲ್ಲದ ರಜೆ ಮಂಜೂರು ಮಾಡಲು ಅವಕಾಶ ಕಲ್ಪಿಸಿದೆ.
ಈ ಆದೇಶದಂತೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅನುಸಾರದ ಷರತ್ತಿಗೆ ಒಳಪಟ್ಟು, ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಮಗು ದತ್ತು ಪಡೆದ ಸಂದರ್ಭದಲ್ಲಿ 180 ದಿನಗಳ ರಜೆಯನ್ನು ಹೆರಿಗೆ ರಜೆ ಮಾದರಿಯಲ್ಲಿ ಮಂಜೂರು ಮಾಡಲು ಅವಕಾಶ ಕಲ್ಪಿಸಿದೆ. ಈ ಅವಕಾಶವನ್ನು ಕೆಎಸ್ಆರ್ ಟಿಸಿಯ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದತ್ತು ಪಡೆದ ಮಕ್ಕಳ ಪೋಷಣೆಗಾಗಿ ಮಹಿಳಾ ಉದ್ಯೋಗಿಗಳಿಗೆ 180 ದಿನಗಳ ರಜೆಯನ್ನು ನೀಡಲಾಗುತ್ತದೆ. ಆದರೆ ಮಹಿಳಾ ಉದ್ಯೋಗಿಗಳು ಮಗುವನ್ನು ದತ್ತು ಪಡೆದ ಸಂದರ್ಭದಲ್ಲಿ ಎರಡು ಜೀವಂತ ಮಕ್ಕಳನ್ನು ಹೊಂದಿರಬಾರದು ಎಂಬುದಾಗಿ ಷರತ್ತು ವಿಧಿಸಿ, ರಜೆ ನೀಡಿದ್ದಾರೆ ಎಂದು ತಿಳಿದುಬಂದಿದೆ.