ಸತ್ತ 7 ಗಂಟೆಗಳ ತರುವಾಯ ಶವಾಗಾರದ ಫ್ರೀಜರ್ ನಿಂದ ಎದ್ದು ಕೂತ ವ್ಯಕ್ತಿ, ಪವಾಡವೇ ಅಥವಾ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯವೇ ?!

ಮೊರಾದಾಬಾದ್: ಸತ್ತಿದ್ದ ವ್ಯಕ್ತಿಯೋರ್ವ ಸಿನಿಮೀಯ ರೀತಿಯಲ್ಲಿ ಶವಾಗಾರದ ಫ್ರೀಜರ್ ನಿಂದ ಎದ್ದು ಕೂತ ಕುತೂಹಲಕರ ಪ್ರಸಂಗ ಉತ್ತರಪ್ರದೇಶದ ಮೊರಾದಾಬಾದ್ ಎಂಬಲ್ಲಿ ನಡೆದಿದೆ. ಅದೂ 7 ಗಂಟೆಗಳ ತರುವಾಯ ಆತ ಜೀವಂತವಾಗಿ ಎದ್ದು ಬಂದಿದ್ದಾನೆ.

 

ಶ್ರೀಕೇಶ್ ಕುಮಾರ್ ಎಂಬಾತ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು ಬೈಕಿನಲ್ಲಿ ವೇಗವಾಗಿ ತೆರಳುತ್ತಿದ್ದಾಗ ಆಕ್ಸಿಡೆಂಟ್ ಆಗಿ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಆತನನ್ನು ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಅಂತೆಯೇ ಆತನ ಶವವನ್ನು ಅಲ್ಲಿನ ಸಿಬ್ಬಂದಿ ಶವಾಗಾರಕ್ಕೆ ಸ್ಥಳಾಂತರಿಸಿದರು.

ಆತನ ಮನೆಯವರು ಆಸ್ಪತ್ರೆಗೆ ಬಂದು ಶವವನ್ನು ಗುರುತಿಸಿ, ಮರಣೋತ್ತರ ಪರೀಕ್ಷೆ ನಡೆಸಲು ಅನುಮತಿ ನೀಡಿ ಸಹಿಯನ್ನೂ ಹಾಕಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದ ಸಂಬಂಧಿಕರಲ್ಲಿ ಒಬ್ಬಳು ಹುಡುಗಿ ಮೃತದೇಹದಲ್ಲಿ ಚಲನೆಯನ್ನು ಗುರುತಿಸಿದ್ದಳು. ಉಳಿದವರೂ ಗಮನಿಸಲಾಗಿ ಆತ ಜೀವದಿಂದ ಇರುವುದು ಪತ್ತೆಯಾಗಿತ್ತು. ನಂತರ ಫ್ರೀಜರ್ ನಿಂದ ಹೊರಕ್ಕೆ ತೆಗೆದು ಸೂಕ್ತ ಶುಶ್ರೂಷೆ ಮಾಡಿದ ನಂತರ ಆತ ನಿದ್ದೆಯಿಂದ ಎದ್ದಂತೆ ಎದ್ದು ಕೂತ ಎಂದು ತಿಳಿದು ಬಂದಿದೆ.

ಅಂದು ಆಕ್ಸಿಡೆಂಟ್ ಆದ ದಿನ ಆತನ ದೇಹವನ್ನು ಆಸ್ಪತ್ರೆಗೆ ತಂದಾಗ ಬೆಳಗಿನ ಜಾವ 3 ಗಂಟೆ. ಆ ಸಂದರ್ಭ ಆಸ್ಪತ್ರೆಯಲ್ಲಿ ಹಾಜರಿದ್ದ ಮೆಡಿಕಲ್ ಆಫೀಸರ್ ದೇಹದ ತಪಾಸಣೆ ನಡೆಸಿದಾಗ ಹೃದಯ ಬಡಿತ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆ ನಂತರ ಆತನನ್ನು ಮೃತ ಎಂದು ನಿರ್ಧರಿಸಿ ಫ್ರೀಜರಿನಲ್ಲಿ ಇಟ್ಟರೂ ಆತ ಆ ಚಳಿಯ ಮಧ್ಯೆಯೂ ಬದುಕಿ ಬಂದಿದ್ದಾನೆ  ಇಂಥ ಘಟನೆಗಳು ನಡೆಯುವುದು ತೀರಾ ಅಪರೂಪ. ಈ ಘಟನೆ ಪವಾಡದಿಂದ ಆಗಿಲ್ಲ, ಬದಲಾಗಿ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.