ಪುತ್ತೂರು : ಅಕ್ರಮ ಶ್ರೀಗಂಧದ ಎಣ್ಣೆ ಸಾಗಾಟ | ತಲೆ ಮರೆಸಿಕೊಂಡ ಆರೋಪಿಯನ್ನು ಬಂಧಿಸಿದ ಸಂಪ್ಯ ಪೊಲೀಸರು
ಪುತ್ತೂರು: ಶ್ರೀಗಂಧ ಎಣ್ಣೆಯನ್ನು ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಲಯದಿಂದ ಜಾಮೀನು ಪಡೆದ ಆರೋಪಿಗಳ ಪೈಕಿ ವಿಚಾರಣೆಗೆ ತಲೆಮರೆಸಿಕೊಂಡಿದ್ದ ಓರ್ವ ಆರೋಪಿಯನ್ನು ಸಂಪ್ಯ ಎಸ್.ಐ ಉದಯ ರವಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಕೇರಳದ ಕಣ್ಣೂರಿನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಕೊಲ್ಲಂಬಾಡಿ ತಾಯಲ್ ನಿವಾಸಿ ಅಬ್ದುಲ್ ಖಾದರ್ ಅವರ ಪುತ್ರ ಮಹಮ್ಮದ್ ರಫೀಕ್ ಎಮ್.ಎಮ್. ಬಂಧಿತ ಆರೋಪಿ, 2006ರಲ್ಲಿ ನಾಲ್ವರು ಆರೋಪಿಗಳು ಕಾರೊಂದರಲ್ಲಿ 2ಲೀಟರ್ ಶ್ರೀಗಂಧದ ಎಣ್ಣೆಯನ್ನು ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.
ನಾಲ್ವರು ಆರೋಪಿಗಳ ಪೈಕಿ ನ್ಯಾಯಾಲದಲ್ಲಿ ವಿಚಾರಣೆಗೆ ಮೂರು ಮಂದಿ ಮಾತ್ರ ಹಾಜರಾಗುತ್ತಿದ್ದು, ಓರ್ವ ಆರೋಪಿ ಮಹಮ್ಮದ್ ರಫೀಕ್ ಎಮ್.ಎಮ್ ಅವರು ತಲೆಮರೆಸಿಕೊಂಡಿದ್ದರು. ಆರೋಪಿಯ ಪತ್ತೆಗೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಆರೋಪಿಯ ಪತ್ತೆ ಕಾರ್ಯಕ್ಕೆ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರ ಮಾರ್ಗದರ್ಶನದಂತೆ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಉದಯರವಿ ಎಂ.ವೈ ಮತ್ತು ಎಸ್.ಐ ಅಮೀನಸಾಬ ಎಮ್ ಅತ್ತಾರ ಮತ್ತು ಸಿಬ್ಬಂದಿಗಳಾದ ಹೆಡ್‌ಕಾನ್‌ಸ್ಟೇಬಲ್ ಅದ್ರಾಮ್, ಪ್ರವೀಣ್ ರೈ ಅವರು ಆರೋಪಿ ಮಹಮ್ಮದ್ ರಫೀಕ್ ಎಮ್ ಎಮ್ ಅವರನ್ನು ಕೇರಳದ ಕಣ್ಣೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.