ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಭೇಟಿಯಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್

ಮಂಗಳೂರು : ವಿಧಾನ‌ಪರಿಷತ್ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಕಾಂಗ್ರೆಸ್ ಮುಖಂಡರ ಜತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರನ್ನು ಬೇಟಿ ಮಾಡಿದ್ದಾರೆ.

ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ನೇತೃತ್ವದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿ ವಿಧಾನಪರಿಷತ್‌ ಗೆ ಪಕ್ಷೇತರ ಅಭ್ಯರ್ಥಿಯಾಗುವ ಬದಲು ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

ರಾಜೇಂದ್ರ ಕುಮಾರ್ ಅವರು ಪಕ್ಷೇತರರಾಗಿ ವಿಧಾನಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿದ್ದು, ಮಂಗಳೂರಿನಲ್ಲಿ ಕಾರ್ಯಾಲಯವನ್ನು ತೆರೆದಿದ್ದಾರೆ. ಸಹಕಾರಿ ಕ್ಷೇತ್ರಕ್ಕೆ ವಿಧಾನ ಪರಿಷತ್‌ನಲ್ಲಿ ಅವಕಾಶ ಕೊಡಿ ಎಂದು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸಲಿಲ್ಲ. ಹಾಗಾಗಿ ಸಹಕಾರಿಗಳ, ಸರ್ವ ಪಕ್ಷಗಳ, ಸಾಮಾಜಿಕ, ಧಾರ್ಮಿಕ ಮುಖಂಡರ ಒತ್ತಡಕ್ಕೆ ಮಣಿದು ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ ಹೇಳಿಕೆ ನೀಡಿದ್ದರು.

ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿರುವ ಎಂ.ಎನ್.ಆರ್ ಕಾಂಗ್ರೆಸ್‌ ಪಕ್ಷದಡಿ ಸ್ಪರ್ಧಿಸುವರೇ ಎಂಬುದು ಪ್ರಶ್ನೆಯಾಗಿದೆ.ಜತೆಗೆ ಬಿಜೆಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಣಕ್ಕಿಳಿಯಲಿದ್ದು,ಗೆಲುವು ನಿಚ್ಚಳವಾಗಿದೆ.ಜತೆಗೆ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಪರಾಮರ್ಶೆ ನಡೆಸುತ್ತಿದೆ.

Leave A Reply

Your email address will not be published.