ಯುವತಿಯೋರ್ವಳಿಗೆ ಬೇರೆ ಗುಂಪಿನ ರಕ್ತ ನೀಡಿ ಜೀವ ರಕ್ಷಕರೇ ಭಕ್ಷಕನಾದ !? | ವೈದ್ಯನ ಮೇಲೆ ವ್ಯಕ್ತವಾಗುತ್ತಿದೆ ವ್ಯಾಪಕ ಆಕ್ರೋಶ
ವೈದ್ಯರನ್ನು ದೇವರ ರೂಪ ಎನ್ನುತ್ತೇವೆ. ಒಬ್ಬರ ಪ್ರಾಣ ಉಳಿಸುವ ಶಕ್ತಿಯನ್ನು ದೇವರು ವೈದ್ಯರಿಗೆ ನೀಡಿದ್ದಾನೆ. ಹೀಗೆ ದೇವರೆಂದು ಪೂಜಿಸುವ ವೈದ್ಯನೇ ಮನುಷ್ಯನ ಪ್ರಾಣ ಕಳೆದರೆ ಹೇಗೆ?
25 ವರ್ಷದ ಯುವತಿಯೊಬ್ಬಳಿಗೆ ಬೇರೆ ಗುಂಪಿನ ರಕ್ತ ನೀಡಿದ ಪರಿಣಾಮ ಯುವತಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವ ಘಟನೆ ಒಡಿಶಾದ ಸುಂದರ್ಗಢ್ ಜಿಲ್ಲೆಯ ಆಸ್ಪತ್ರೆಯಲ್ಲಿ ನಡೆದಿದೆ.
ಕುಟ್ರಾ ಬ್ಲಾಕ್ನ ಬುಡಕಟ್ಟು ಗ್ರಾಮದ ನಿವಾಸಿ ಸರೋಜಿನಿ ಕಾಕು ಅವರನ್ನು ಗುರುವಾರ ಮಧ್ಯಾಹ್ನ ರೂರ್ಕೆಲಾ ಸರ್ಕಾರಿ ಆಸ್ಪತ್ರೆಗೆ(ಆರ್ಜಿಹೆಚ್) ದಾಖಲಿಸಲಾಗಿತ್ತು. ಆಗ ಸರೋಜಿನಿ ಅವರು ರಕ್ತಹೀನತೆಯಿಂದ ಬಳಲುತ್ತಿದ್ದು, ಆಕೆಗೆ ರಕ್ತ ವರ್ಗಾವಣೆ ಮಾಡಬೇಕಾಯಿತು. ಆದರೆ ವೈದ್ಯರು ನಿರ್ಲಕ್ಷ್ಯದಿಂದ ಸರೋಜಿನಿ ಅವರಿಗೆ ತಪ್ಪು ರಕ್ತ ನೀಡಲಾಗಿದ್ದು, ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರೋಜಿನಿ ಸಂಬಂಧಿಯೊಬ್ಬರು ಈ ಕುರಿತು ಮಾತನಾಡಿದ್ದು, ಆಕೆಯ ರಕ್ತದ ಗುಂಪು ಒ ಪಾಸಿಟಿವ್. ಆದರೆ ವೈದ್ಯರು ಆಕೆಗೆ ಬಿ ಪಾಸಿಟಿವ್ ನೀಡಿದ್ದಾರೆ ಎಂದು ಗೋಳಾಡಿದರು.
ಕುತ್ರಾ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿ ಈ ಕುರಿತು ಮಾತನಾಡಿದ್ದು, ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ತನಿಖೆ ನಡೆಸಲು ವಿಶೇಷ ಸಮಿತಿಯನ್ನು ರಚಿಸಿದ್ದು, ಮೃತದೇಹವನ್ನು ಸಂರಕ್ಷಿಸಲಾಗಿದೆ. ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.