ಧ್ಯೇಯ ನಿಷ್ಠ -ದೇಶನಿಷ್ಠ ರಾಜಕಾರಣ ಬಿಜೆಪಿಯ ಸಂಕಲ್ಪ-ನಳಿನ್ ಕುಮಾರ್
ಮಂಗಳೂರು : ಧ್ಯೇಯ ನಿಷ್ಠ -ದೇಶನಿಷ್ಠ ರಾಜಕಾರಣ ಬಿಜೆಪಿಯ ಸಂಕಲ್ಪವಾಗಿದ್ದು ಈ ಕಾರ್ಯದಲ್ಲಿ ಪಕ್ಷದ ಪ್ರತಿಯೋರ್ವ ಕಾರ್ಯಕರ್ತರು ಸಮರ್ಪಣ ಭಾವದಿಂದ ಸಮರ್ಪಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಹೇಳಿದ್ದಾರೆ.
ಮಂಗಳೂರಿನ ಟಿ.ವಿ. ರಮಣ್ ಪೈ ಹಾಲ್ನಲ್ಲಿ ಆಯೋಜಿಸಿದ ಬಿಜೆಪಿ ಕರ್ನಾಟಕ ಪ್ರಕೋಷ್ಠಗಳ ಎರಡು ದಿನಗಳ ರಾಜ್ಯಮಟ್ಟದ ಚಿಂತನ ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ವಿಚಾರಧಾರೆಯ ಭದ್ರ ತಳಹದಿಯಲ್ಲಿ ಬೆಳೆದು ಬಂದಿರುವ ಬಿಜೆಪಿ ಎಂದೂ ತನ್ನ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡಿಲ್ಲ. ಬಿಜೆಪಿಗೆ ರಾಜಕಾರಣ ವೃತ್ತಿಯಲ್ಲ. ಅದೊಂದು ವ್ರತ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಗಿಂತ ದೇಶ ಮುಖ್ಯ; ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಿದ್ಧಾಂತದಡಿ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸ್ವಚ್ಛ, ಭ್ರಷ್ಟ ರಹಿತ ಆಡಳಿತವನ್ನು ನೀಡಿದ ಹೆಗ್ಗಳಿಕೆಯನ್ನು ಬಿಜೆಪಿ ಹೊಂದಿದೆ. ಅಟಲ್ ಬಿಹಾರಿ ವಾಜಪೇಯಿಯವರ ಆರು ವರ್ಷಗಳ ಆಡಳಿತ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಈವರೆಗಿನ ಆಡಳಿತದಲ್ಲಿ ಎಲ್ಲೂ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆರೋಪಗಳಿಲ್ಲ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಲಾಲ್ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದ ಅವಧಿಯನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಪ್ರಧಾನಿಗಳ ಕಾಲದಲ್ಲೂ ಭ್ರಷ್ಟಾಚಾರಗಳು ನಡೆದಿವೆ. ಬಿಜೆಪಿಯದ್ದು ಭ್ರಷ್ಟಾಚಾರ ರಹಿತ ಆಡಳಿತವಾಗಿದ್ದರೆ ಕಾಂಗ್ರೆಸ್ನದ್ದು ಭ್ರಷ್ಟಾಚಾರ ಸಹಿತ ಆಡಳಿತ ಎಂದರು.
ಮಹಾತ್ಮಾ ಗಾಂಧೀಜಿಯವರು ರಾಮರಾಜ್ಯದ ಕನಸು ಕಂಡಿದ್ದರಲ್ಲದೇ ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸ ಬೇಕೆಂದು ಹೇಳಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳನ್ನು ಹಾಗೂ ರಾಮ ರಾಜ್ಯದ ಕನಸು ಸಾಕಾರಗೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅವರು ಮೊದಲೇ ಉಹಿಸಿ ಆ ರೀತಿ ಹೇಳಿದ್ದರು ಎಂದರು.
ದೇಶದ ರಾಜಕೀಯ ಇತಿಹಾಸ ಗಮನಿಸಿದರೆ ಕಾಂಗ್ರೆಸ್, ಜನತಾ ಪರಿವಾರ ಸಾಕಷ್ಟು ಬಾರಿ ವಿಭಜನೆಗೊಂಡಿದೆ. ಆದರೆ ಬಿಜೆಪಿ ಸಂಘಟನಾತ್ಮಕವಾಗಿ ಬಲಿಷ್ಠವಾಗಿ ಬೆಳೆದಿದೆ. ನಮ್ಮ ವಿಚಾರಧಾರೆ, ಕಾರ್ಯಕ್ರಮಗಳಲ್ಲಿ ಎಲ್ಲೂ ವ್ಯತ್ಯಾಸಗಳಾಗಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಪ್ರಸ್ತಾವನೆಗೈದರು. ರಾಜ್ಯ ಸಂಯೋಜಕ ಭಾನು ಪ್ರಕಾಶ್, ಸಹ ಸಂಯೋಜಕ ಡಾ| ಶಿವ ಯೋಗಿ ಸ್ವಾಮಿ ಉಪಸ್ಥಿತರಿದ್ದರು. ಕೈಗಾರಿಕಾ ಪ್ರಕೋಷ್ಠ ಸಂಚಾಲಕ ಪ್ರದೀಪ್ ಪೈ ಸ್ವಾಗತಿಸಿದರು. ನಗರ ಪ್ರಕೋಷ್ಠ ಸಂಚಾಲಕ ಪ್ರೇಮಾನಂದ ಶೆಟ್ಟಿ ವಂದಿಸಿದರು.