ಕಾಲೇಜಿನಲ್ಲಿ ವಿದ್ಯಾರ್ಥಿಗಳ 250 ಕ್ಕೂ ಮೊಬೈಲ್ ಜಪ್ತಿ | ಫೋನ್ ನೋಡಿದ ಪೋಷಕರಿಗೆ ಹೈ ವೋಲ್ಟೇಜ್ ಶಾಕ್ !
ಕಾರವಾರ: ಕೊರೊನಾ ಬಂದ ನಂತರ ಆನ್‍ಲೈನ್ ಕ್ಲಾಸ್‍ಗಳಿಗೆ ಮಕ್ಕಳ ಕೈಗಳಲ್ಲಿ ಮೊಬೈಲ್‍ಗಳು ಬಂದು ಕುಳಿತಿವೆ. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ತೊಡಕಾಗಬಾರದು ಎಂದು ಹಲವು ಪೋಷಕರು, ಮಕ್ಕಳಿಗೆ ತಮ್ಮ ಕಷ್ಟಗಳನ್ನು ಬದಿಗೊತ್ತಿ ಮೊಬೈಲ್ ಖರೀದಿ ಮಾಡಿಕೊಟ್ಟಿದ್ದರು. ಇದೀಗ ಆಫ್‍ಲೈನ್ ಕ್ಲಾಸ್ ಗಳು ಪ್ರಾರಂಭವಾಗಿದೆ. ಆದರೆ ಮಕ್ಕಳ ಕೈಗೆ ಕೊಟ್ಟ ಮೊಬೈಲ್ ಅನ್ನು ವಾಪಸ್ ಪಡೆಯಲು ಪೋಷಕರಿಗೆ ಸಾಧ್ಯ ಆಗ್ತಿಲ್ಲ. ಒಂದು ಕಡೆ ಮೊಬೈಲ್ ಕೊಡದೆ ಹೋದರೆ ಮಕ್ಳು ಜಗ್ಲ ಕಾಯ್ತಿದ್ದಾರೆ. ಇದರ ಮಧ್ಯೆ ಮಕ್ಕಳ ಮೊಬೈಲ್ ಚೆಕ್ ಮಾಡಿದ ಪೋಷಕರಿಗೆ ಹೈ ವೋಲ್ಟೇಜ್ ಶಾಕ್ ಹೊಡೆದಿದೆ.
ನಿನ್ನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ವೂ ಕಾಲೇಜಿನ ಪ್ರಾಚಾರ್ಯರು ತರಗತಿ ಸಮಯದಲ್ಲಿ ವಿದ್ಯಾರ್ಥಿಗಳು ಬಳಸುತಿದ್ದ 250 ಕ್ಕೂ ಅಧಿಕ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದಾಗ ಹಲವು ಪೋಷಕರಿಗೆ ತಮ್ಮ ಮಕ್ಕಳ ಬಳಿ ಮೊಬೈಲ್ ಇರುವುದೇ ತಿಳಿದಿರಲಿಲ್ಲವಂತೆ. ಮತ್ತೆ ಕೆಲ ವಿದ್ಯಾರ್ಥಿಗಳ ಮೊಬೈಲ್‍ನಲ್ಲಿ ಗೂಗಲ್ ಹಿಸ್ಟರಿ ತೆಗೆದು ನೋಡಿದಾಗ ಮಕ್ಕಳ ‘ ದೊಡ್ಡ ‘ ಬುದ್ದಿ ಬಹಿರಂಗವಾಗಿದೆ. ಅವರ ಮೊಬೈಲ್ ನಲ್ಲಿ ಅಶ್ಲೀಲ ವೀಡಿಯೋ ಸೇರಿದಂತೆ ಇತರೆ ವೀಡಿಯೋ ಡೌನ್ ಲೋಡ್ ಮಾಡಿದ್ದೂ ಗೊತ್ತಾಗಿ ಪೋಷಕರು ಬೊಬ್ಬೆ ಹೊಡೀತಿದ್ದಾರೆ.
ಅಷ್ಟೇ ಅಲ್ಲದೆ ಇನ್ನೂ ಕೆಲವರು ಮೊಬೈಲ್ ಮರಳಿ ಪಡೆಯಲು ತಮ್ಮ ಪೋಷಕರು ಎಂದು ಇತರೆ ವ್ಯಕ್ತಿಗಳನ್ನು ಕರೆತಂದು ಪ್ರಾಚಾರ್ಯರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಕಾಲೇಜು ಪ್ರಾರಂಭವಾದಾಗ ಮಕ್ಕಳು ಅಧ್ಯಯನದ ಕಡೆ ಗಮನ ನೀಡದಿರುವುದು ಗಮನಕ್ಕೆ ಬಂತು. ಇತರೆ ಚಟುವಟಿಕೆಯಲ್ಲಿ ಸಹ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದರು, ಸದಾ ಮೊಬೈಲ್‍ನಲ್ಲಿ ಮಕ್ಕಳು ಕಾಲ ಕಳೆಯುವುದನ್ನು ನೋಡಿ ಅನಿವಾರ್ಯವಾಗಿ ಕಾಲೇಜಿನಲ್ಲಿ ಮಕ್ಕಳ ಮೊಬೈಲ್ ಅನ್ನು ಜಪ್ತಿ ಮಾಡಲಾಯಿತು ಎಂದು ಕಾಲೇಜಿನ ಪ್ರಾಂಶುಪಾಲ ಸತೀಶ್ ನಾಯ್ಕ ತಿಳಿಸಿದ್ದಾರೆ.
ಸದ್ಯ ಮಕ್ಕಳಿಗೆ ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿ ಮೊಬೈಲ್ ಅನ್ನು ಮರಳಿ ನೀಡಲಾಗಿದೆ. ಮಕ್ಕಳು ಮೊಬೈಲ್‍ಗಳನ್ನು ಅಧ್ಯಯನ ವಿಷಯಕ್ಕೆ ಹೊರತುಪಡಿಸಿ, ಇತರೆ ವಿಷಯಗಳಿಗೆ ಬಳಸುತ್ತಿರುವುದು ಮಾತ್ರ ಆತಂಕ ತರುವಂತೆ ಮಾಡಿದೆ.