ದ್ವಿಚಕ್ರವಾಹನ ಸವಾರರ ಸುರಕ್ಷತೆಗಾಗಿ ಬರುತ್ತಿದೆ ಹೊಸ ಸಿಸ್ಟಮ್ | ಕಾರುಗಳಲ್ಲಿ ಇರುವಂತೆಯೇ ಇನ್ನು ಮುಂದೆ ದ್ವಿಚಕ್ರವಾಹನಗಳಲ್ಲಿಯೂ ಇರಲಿದೆ ಏರ್ ಬ್ಯಾಗ್ !!
ಸರಿ ಸುಮಾರು 20 ವರ್ಷಗಳ ಹಿಂದೆ ಫೋರ್ಡ್ ಕಂಪನಿ ಕಾರಿನ ಏರ್ ಬ್ಯಾಗ್ ಸಿಸ್ಟಂ ನ್ನು ಮಾರುಕಟ್ಟೆಗೆ ತಂದಾಗ ಜನರು ನಗೆಯಾಡಿದ್ದರು. ಅದನ್ನು ಬಲೂನಿಗೆ ಹೋಲಿಸಿದ್ದರು. ಆದರೆ ಅದರಿಂದ ಅದೆಷ್ಟೋ ಜನರ ಜೀವ ಉಳಿದಿದೆ. ಈಗ ಯಾರೇ ಕಾರು ಖರೀದಿಸಲು ಹೋದರೆ ಮೊದಲು ಏರ್ ಬ್ಯಾಗ್ ಸಿಸ್ಟಮ್ ಇದೆಯಾ ಎಂದು ಕೇಳೇ ಕೇಳುತ್ತಾರೆ. ಅದೇ ಏರ್ ಬ್ಯಾಗ್ ಸಿಸ್ಟಮ್ ಇದೀಗ ದ್ವಿಚಕ್ರವಾಹನಕ್ಕೂ ಕಾಲಿಡುತ್ತಿದೆ.
ಸ್ಕೂಟರ್ ಮತ್ತು ಮೋಟಾರ್ ಸೈಕಲ್‌ಗಳಂಥ ದ್ವಿಚಕ್ರ ವಾಹನಗಳ ಸವಾರರ ಸುರಕ್ಷತೆಗಾಗಿ ಕಾರ್‌ಗಳಲ್ಲಿ ಇರುವ ರೀತಿಯಲ್ಲಿ ಏರ್‌ಬ್ಯಾಗ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಪಿಯಾಜ್ಜಿಯೋ ಸಮೂಹವು ವಾಹನ ಸುರಕ್ಷತಾ ಸಾಧನಗಳ ಕಂಪನಿ ಆಟೋಲಿವ್‌ನೊಂದಿಗೆ ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ.
ಮಿಲಿಸೆಕೆಂಡ್ ಅವಧಿಯೊಳಗೆ ಏರ್‌ಬ್ಯಾಗ್ ತೆರೆದುಕೊಂಡು ಚಾಲಕರು ಹಾಗೂ ಹಿಂಬದಿ ಸವಾರರಿಗೆ ರಕ್ಷಣೆ ಒದಗಿಸಲಿದೆ. ವಾಹನದ ಚೌಕಟ್ಟಿನ ಮೇಲ್ಬಾಗದಲ್ಲಿ ಏರ್ ಬ್ಯಾಗ್ ಅಳವಡಿಸಲಾಗುತ್ತದೆ. ಅವಘಡ ಸಂಭವಿಸಿದ ಸೆಕೆಂಡ್‌ನೊಳಗೆ ಅದು ಕಾರ್ಯಾಚರಿಸಲಿದೆ ಎಂದು ಮೂಲಗಳು ತಿಳಿಸಿವೆ. ಆಟೋಲಿವ್ ಈಗಾಗಲೇ ಸುಧಾ ಸಿಮ್ಯುಲೇಶನ್ ಸಾಧನಗಳಿಂದ ಇಂಥ ಏರ್‌ಬ್ಯಾಗ್‌ನ ಆರಂಭಿಕ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ ಉತ್ಪನ್ನದ ಪೂರ್ಣ ಪ್ರಮಾಣದ ಪರೀಕ್ಷೆಯನ್ನೂ ನಡೆಸಿದೆ.
ಪಿಯಾಜ್ಜಿಯೋ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಏರ್‌ಬ್ಯಾಗ್ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಆಟೋಲಿವ್‌ಗೆ ನೆರವಾಗಲಿದೆ. ಸದ್ಯ ಭವಿಷ್ಯದಲ್ಲಿ ವಾಣಿಜ್ಯ ಮಟ್ಟದಲ್ಲಿ ಅದರ ಉತ್ಪಾದನೆಗೆ ಕೂಡ ಅದು ಸಹಾಯಕವಾಗಲಿದೆ. ಹೆಚ್ಚು ಅಪಘಾತ ನಡೆಯುವ ರಸ್ತೆಗಳಲ್ಲಿ ಸಾಗುವ ದ್ವಿಚಕ್ರ ವಾಹನಗಳ ಸವಾರರಿಗೆ ಉತ್ತಮ ಸುರಕ್ಷತೆ ಒದಗಿಸುವುದು ಏರ್‌ಬ್ಯಾಗ್‌ನ ಗುರಿಯಾಗಿದೆ.