ಕ್ಯಾನ್ಸರ್ ಪೀಡಿತರಿಗೆ ತಲೆ ಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್ ಕಿರಿಯ ಪುತ್ರ ರಿಯಾನ್
ಮುಂಬೈ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು (ನವೆಂಬರ್ 7) ತಮ್ಮ ತಲೆ ಕೂದಲನ್ನು ದಾನ ಮಾಡಿದ್ದಾರೆ.
ಕ್ಯಾನ್ಸರ್ ಎಂದರೆ ಸಾಮಾನ್ಯವಾಗಿ ಎಲ್ಲರೂ ಭಯ ಪಡುತ್ತಾರೆ. ಕ್ಯಾನ್ಸರ್ ಎಂಬ ರೋಗವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿರುವುದನ್ನು ನೋಡಿರುತ್ತೇವೆ. ಇದರ ಸಲುವಾಗಿ ಅನೇಕರು ಮೃತಪಟ್ಟಿರುವುದನ್ನು ಸಹ ಕೇಳಿರುತ್ತೇವೆ . ಕ್ಯಾನ್ಸರ್ ಬಂದಾಗ ಕಿಮೊತೆರಪಿ ಚಿಕಿತ್ಸೆ ಮಾಡಿಕೊಂಡಾಗ ವ್ಯಕ್ತಿ ತನ್ನ ತಲೆಯ ಕೂದಲನ್ನು ಕ್ರಮೇಣ ಕಳೆದು ಕೊಳ್ಳುತ್ತಾನೆ. ವ್ಯಕ್ತಿ ತನ್ನ ತಲೆಕೂದಲನ್ನು ಕಳೆದುಕೊಂಡು ಬೋಳುತಲೆ ಯಾದರೆ ಮುಜುಗರ ಪಟ್ಟುಕೊಳ್ಳುತ್ತಾನೆ. ಅಂತಹ ಕ್ಯಾನ್ಸರ್ ಪೀಡಿತರಿಗೆ ಉಪಯೋಗವಾಗಲೆಂದು ರಿಯಾನ್ ತನ್ನ ತಲೆಕೂದಲನ್ನು ದಾನ ಮಾಡಿದ್ದಾನೆ.
ರಿಯಾನ್ ತಲೆ ಕೂದಲು ಕ್ಷೌರ ಮಾಡುತ್ತಿರುವ ವೀಡಿಯೋವನ್ನು ತಾಯಿ ಮಾಧುರಿ ದೀಕ್ಷತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಅವಶ್ಯಕವಾದ ಉದ್ದದ ತಲೆ ಕೂದಲನ್ನು ದಾನ ಮಾಡಲು 2 ವರ್ಷಗಳಿಂದ ತಮ್ಮ ಮಗ ರಾಯನ್ ತಲೆ ಕೂದಲು ಕತ್ತರಿಸಿಲ್ಲ. ರಿಯಾನ್ ಈ ನಿರ್ಧಾರ ನಮಗೆ ಆಶ್ಚರ್ಯವನ್ನುಂಟು ಮಾಡಿದೆ. ಅಲ್ಲದೆ ಅತಿ ಹೆಚ್ಚು ಹೆಮ್ಮೆ ಉಂಟು ಮಾಡಿದೆ ಎಂದು ಮಾಧುರಿ ದೀಕ್ಷಿತ್ ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ರಾಯನ್ ಈ ಕಾರ್ಯಕ್ಕೆ ಸೋಶಿಯಲ್ ಮೀಡಿಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನೆಟ್ಟಿಗರು ಕೂಡ ಕಮೆಂಟ್ ಮೂಲಕ ಶ್ಲಾಫಿಸಿದ್ದು, ಅದರಲ್ಲಿ ಒಬ್ಬರು, ಉತ್ತಮ ಚಿಂತನೆ ಮತ್ತು ಕೊಡುಗೆ, ರಿಯಾನ್‍ಗೆ ಆಲ್ ದಿ ಬೆಸ್ಟ್ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಿಮ್ಮ ಮಗನ ಬಗ್ಗೆ ಹೆಮ್ಮೆಯಾಗುತ್ತದೆ ಮತ್ತು ಉತ್ತಮ ಪೋಷಕರಿಗೆ ಅಭಿನಂದನೆಗಳು ಎಂದು ಕಮೆಂಟ್ ಮಾಡಿ ಶ್ಲಾಫಿಸಿದ್ದಾರೆ.