ಬೆಳ್ತಂಗಡಿ: ಮಲವಂತಿಗೆಯಲ್ಲಿ ನದಿ ದಾಟುತ್ತಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು
ನದಿ ದಾಟುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದಲ್ಲಿ ನಡೆದಿದೆ.
ಮಲವಂತಿಗೆ ಗ್ರಾಮದ ಹಿರಿಮಾರು ನಿವಾಸಿ ಕಿನ್ನಿಗೌಡರ ಪುತ್ರ ಗಣೇಶ್(40) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.
ಗಣೇಶ್ ರವರು ನಿನ್ನೆ ಸಂಜೆ ವೇಳೆ ತಮ್ಮ ತೋಟದಲ್ಲಿ ಅಡಿಕೆ ಹೆಕ್ಕಿ ನಂತರ ಮನೆಗೆ ಮರಳಲು ಮಲ್ಲಕಜ ಬಳಿ ಹಳ್ಳ ದಾಟುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನದಿಗೆ ಜಾರಿ ಬಿದ್ದಿದ್ದರು. ಅವರು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು. ಸ್ಥಳೀಯರಾದ ಮಲ್ಲ ಸುಧಾಕರ ಹೆಗ್ಡೆ, ತಾ.ಪಂ ಮಾಜಿ ಸದಸ್ಯ ಜಯರಾಮ ಆಲಂಗಾವು, ಸಹೋದರರು, ಮಲವಂತಿಗೆ ಗ್ರಾ.ಪಂ ಉಪಾಧ್ಯಕ್ಷ ಡಿ. ದಿನೇಶ್ ಗೌಡ ಹಾಗೂ ಸ್ಥಳೀಯರು ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ತುಸು ದೂರದ ಬಂಡೆ ಕಲ್ಲಿನ ಸಂದಿನಲ್ಲಿ ಸಿಲುಕಿದ್ದ ಅವರನ್ನು ನೀರಿನಿಂದ ಮೇಲಕ್ಕೆತ್ತಲಾಯಿತಾದರೂ, ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿದೆ.
ಮೃತರು ತಂದೆ ಕಿನ್ನಿ ಗೌಡ, ತಾಯಿ ಲಲಿತಾ, ಪತ್ನಿ ಲೀಲಾವತಿ ಇಬ್ಬರು ಮಕ್ಕಳಾದ ಸಾನಿಧ್ಯ, ಆದ್ಯಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.