ಮುಕ್ಕೂರು : ಸ್ಪೋಕನ್ ಇಂಗ್ಲಿಷ್ ತರಗತಿ ಉದ್ಘಾಟನೆ
ಆಂಗ್ಲ ಭಾಷೆ ಕಠಿನ ಎಂಬ ಮನಸ್ಥಿತಿಯಿಂದ ಹೊರ ಬನ್ನಿ : ಎಂ.ಕೆ. ಉಮೇಶ್ ರಾವ್ ಕೊಂಡೆಪ್ಪಾಡಿ
ಮುಕ್ಕೂರು : ಮುಕ್ಕೂರು ಶಾಲಾ ಹಿತಚಿಂತನ ಸಮಿತಿ, ಎಸ್ ಡಿಎಂಸಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿ ಉದ್ಘಾಟನಾ ಸಮಾರಂಭವು ನ.7 ರಂದು ಮುಕ್ಕೂರು ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲಾ ಹಿರಿಯ ವಿದ್ಯಾರ್ಥಿ, ಬಹು ರಾಷ್ಟ್ರೀಯ ಕಂಪೆನಿಯ ನಿವೃತ್ತ ಎಂಜಿನಿಯರ್ ಎಂ.ಕೆ.ಉಮೇಶ್ ರಾವ್ ಕೊಂಡೆಪ್ಪಾಡಿ ಉದ್ಘಾಟಿಸಿ, ಆಂಗ್ಲ ಭಾಷೆ ಮಾತನಾಡುವುದು ಕಷ್ಟ ಎಂಬ ಕೀಳರಿಮೆ ಇಟ್ಟುಕೊಳ್ಳದೆ ಕಲಿಯಲು ಪ್ರಯತ್ನ ಪಡಬೇಕು. ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯವಿದೆ. ಇದಕ್ಕೆ ಅನೇಕ ಸಾಧಕರೇ ಸಾಕ್ಷಿ ಎಂದರು.
ಈ ಹಿಂದೆ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಸೋಲು ಅನ್ನುವುದು ಒಂದು ಸಹಜ ಸಂಗತಿ. ಅದನ್ನು ಧನಾತ್ಮಕವಾಗಿ ಸ್ವೀಕಾರ ಮಾಡುತಿದ್ದರು. ಇತ್ತೀಚಿನ ವರ್ಷಗಳಲ್ಲಿ ವಿಭಕ್ತ ಕುಟುಂಬ ವ್ಯವಸ್ಥೆಯಿದ್ದು ಇಲ್ಲಿ ಹೆತ್ತವರು ಮಕ್ಕಳು ಸೋಲಲೇಬಾರದು ಎಂಬ ಭಾವನೆಗಳಿವೆ. ಆ ಮನಸ್ಥಿತಿ ಹೋಗಲಾಡಿಸಿ ಗೆಲುವಿನಷ್ಟೇ ಸೋಲು ಕೂಡ ಜೀವನದ ಭಾಗ ಎಂದು ಸ್ವೀಕಾರ ಮಾಡಬೇಕು ಎಂದರು.
ವಿದೇಶದಲ್ಲಿ ಕಾನೂನು ಜಾರಿ ಮಾಡಿದಾಗ ಅದು ನಮ್ಮ ಅನುಕೂಲಕ್ಕೆಎಂದು ಅಲ್ಲಿನ ಜನರು ಭಾವಿಸುತ್ತಾರೆ. ನಮ್ಮ ದೇಶದಲ್ಲಿಯು ಆ ಜಾಗೃತಿ ಮೂಡಬೇಕು. ಕಾನೂನು ಪಾಲಿಸುವ ಮೂಲಕ ಮಕ್ಕಳ ಮನಸ್ಸಿನಲ್ಲಿ ಜಾಗೃತಿ ಭಾವವನ್ನು ಮೂಡಿಸಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಮುಕ್ಕೂರು ಶಾಲಾ ಹಿತ ಚಿಂತನ ಸಮಿತಿ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಶಾಲಾ ಬೆಳವಣಿಗೆಯಲ್ಲಿ ಶಿಕ್ಷಕರು, ಊರವರ ಪಾತ್ರ ಅತ್ಯಂತ ಹಿರಿದಾದದು. ಈಗ ಆರಂಭಿಸಿರುವ ಸ್ಪೋಕನ್ ಇಂಗ್ಲಿಷ್ ಚಟುವಟಿಕೆಯ ಸದುಪಯೋಗ ಪಡೆದುಕೊಳ್ಳುವಲ್ಲಿ ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಕುಂಬ್ರ ಮಾತನಾಡಿ, ಹೊಸ್ತಿಲಿನಲ್ಲಿರುವ ಮುಕ್ಕೂರು ಶಾಲೆಯಲ್ಲಿ ಮಕ್ಕಳು ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಹತ್ತಾರು ಚಟುವಟಿಕೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಇದು ವ್ಯಕ್ತಿತ್ವ ವಿಕಸನಕ್ಕೆ ಪೂರಕವು ಆಗಿದೆ. ಇದಕ್ಕಾಗಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ವ್ಯವಸ್ಥೆಗಳು ಉತ್ತಮವಾಗಿದ್ದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ. ಸ್ಪೋಕನ್ ಇಂಗ್ಲಿಷ್ ಆ ನಿಟ್ಟಿನಲ್ಲಿ ಮಹತ್ವದ ಪ್ರಯತ್ನ. ಹೊಸ ಹೊಸ ಚಟುವಟಿಕೆಗಳ ಮೂಲಕ ಮಾದರಿ ಶಾಲೆಯಾಗಿ ಹೊರ ಹೊಮ್ಮಲಿ ಎಂದರು.
ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ ಮಾತನಾಡಿ, ಮುಕ್ಕೂರು ಶಾಲಾ ಶಿಕ್ಷಣ ಗುಣಮಟ್ಟಕ್ಕೆ ಪೂರಕವಾಗಿ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿರುವುದು ಉತ್ತಮ ಬೆಳವಣಿಗೆ. ಈ ಊರಿನ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಶಾಲೆಯ ಬಗ್ಗೆಯು ಇತರರ ಜತೆ ಧನಾತ್ಮಕ ಅಭಿಪ್ರಾಯವನ್ನು ಹಂಚಿಕೊಳ್ಳೋಣ ಎಂದರು.
ನ್ಯಾಯವಾದಿ ಬಾಬು ಗೌಡ ಅಡ್ಯತಕಂಡ ಮಾತನಾಡಿ, ಆಂಗ್ಲ ಭಾಷೆಯ ಸಾಮಾನ್ಯ ಜ್ಞಾನದ ಬಗ್ಗೆ ಪ್ರಾಥಮಿಕ ವ್ಯಾಸಂಗದ ಅವಧಿಯಲ್ಲಿ ಮಕ್ಕಳಿಗೆ ತಿಳಿಸುವುದು ಅತ್ಯಗತ್ಯ. ಇದರಿಂದ ಭವಿಷ್ಯದಲ್ಲಿ ಉದ್ಯೋಗ ಸೇರಿದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ತೋರಲು ಸಾಧ್ಯವಾಗುತ್ತದೆ ಎಂದರು.
ಎಸ್ ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಸರ್ವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ವಕ್ಪ್ ಬೋರ್ಡ್ ಸದಸ್ಯ ಇಸ್ಮಾಯಿಲ್ ಕಾನಾವು ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಗತಿಪರ ಕೃಷಿಕರಾದ ಸುಬ್ರಾಯ ಭಟ್ ನೀರ್ಕಜೆ, ಮೋಹನ್ ಬೈಪಡಿತ್ತಾಯ, ನಾಗರಾಜ ಭಟ್ ಕಜೆ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ನಾರಾಯಣ ಕೊಂಡೆಪ್ಪಾಡಿ, ಮಹಮ್ಮದ್ ತೋಟದಮೂಲೆ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ಹಿತ ಚಿಂತನಾ ಸಮಿತಿ ಸಂಚಾಲಕ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ ಅವರು ವಿವೇಕಾನಂದ ಬಿಎಡ್ ಕಾಲೇಜಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಗೌರವಿಸಲಾಯಿತು. ಸಮಿತಿಯ ಗೌರವ ಸಲಹೆಗಾರ ಸಂತೋಷ್ ಕುಮಾರ್ ರೈ ಅವರು ಅಭಿನಂದನಾ ಮಾತುಗಳನ್ನಾಡಿದರು.
ಶಾಲಾ ಹಿತ ಚಿಂತನಾ ಸಮಿತಿ ಸಂಚಾಲಕ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಶಾಲಾ ಮುಖ್ಯಗುರು ವಸಂತಿ ವಂದಿಸಿದರು. ಶಿಕ್ಷಕ ಶಶಿಕುಮಾರ್ ನಿರೂಪಿಸಿದರು.