ಇಂದು ದೆಹಲಿಯಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ, ದಿ.ಪೇಜಾವರ ವಿಶ್ವೇಶತೀರ್ಥ ಶ್ರೀಪಾದರಿಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ
ನವದೆಹಲಿಯಲ್ಲಿ ನ.8ರ ಸೋಮವಾರ ನಡೆಯುವ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ನಿರ್ಯಾಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಹಾಗೂ ಅಕ್ಷರ ಸಂತ ಖ್ಯಾತಿಯ ಹರೇಕಳ ಹಾಜಬ್ಬ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರಾಷ್ಟ್ರಪತಿ ಭವನದಲ್ಲಿ ಬೆಳಗ್ಗೆ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಹಾಜಬ್ಬ ಅವರು ನ. 7ರಂದು ಮಂಗಳೂರು ವಿಮಾನನಿಲ್ದಾಣದಿಂದ ಬೆಂಗಳೂರಿಗೆ ತೆರಳಿ ಅಲ್ಲಿಂದ ಹೊಸದಿಲ್ಲಿಗೆ ಮಧ್ಯಾಹ್ನ ತಲುಪಿದ್ದಾರೆ. ದಿಲ್ಲಿ ವಿಮಾನ ನಿಲ್ದಾಣದಿಂದ ಸಂಸದ ನಳಿನ್ ಕುಮಾರ್ ಕಟೀಲು ಅವರ ದಿಲ್ಲಿ ಕಚೇರಿಯ ಅಪ್ತಸಹಾಯಕ ಹೊಟೇಲ್ ಅಶೋಕಕ್ಕೆ ಕರೆದುಹೋಗಿದ್ದು ಅಲ್ಲಿ ವಾಸ್ತವ್ಯ ಹೂಡಿದ್ದಾರೆ. ಹಾಜಬ್ಬರ ಜತೆ ಅವರ ಸಹೋದರನ ಪುತ್ರ ತೆರಳಿದ್ದಾರೆ.
ಹಾಜಬ್ಬ ಅವರು ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಸೋಮವಾರವೇ ದಿಲ್ಲಿಯಿಂದ ಹೊರಟು ಬೆಂಗಳೂರು ಮೂಲಕ ಮಂಗಳೂರಿಗೆ ಮಂಗಳವಾರ ಆಗಮಿಸಲಿದ್ದಾರೆ. ಅವರ ಎಲ್ಲ ಖರ್ಚುವೆಚ್ಚಗಳನ್ನು ಕೇಂದ್ರ ಸರಕಾರ ಭರಿಸುತ್ತಿದೆ.
ಹಾಜಬ್ಬ ಅವರು ರವಿವಾರ ವಿಮಾನ ನಿಲ್ದಾಣಕ್ಕೆ ತೆರಳಲು ದ.ಕ. ಜಿಲ್ಲಾಡಳಿತ ವಾಹನ ವ್ಯವಸ್ಥೆ ಮಾಡಿತ್ತು. ಮಂಗಳವಾರ ಬೆಳಗ್ಗೆಯೂ ಜಿಲ್ಲಾಡಳಿತವೇ ವಾಹನ ವ್ಯವಸ್ಥೆ ಮಾಡಲಿದೆ. ಸಮಾರಂಭಕ್ಕೆ ತೆರಳುವ ಮುಂಚಿತವಾಗಿ ಕೋವಿಡ್ ಪರೀಕ್ಷೆ ಅಗತ್ಯವಾಗಿದ್ದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಹಾಜಬ್ಬರ ಮನೆಗೆ ಕಳುಹಿಸಿ ಆರ್‌ಟಿಪಿಸಿಆರ್ ತಪಾಸಣೆ ನಡೆಸಿ ವರದಿ ಶೀಘ್ರ ದೊರಕು ವಂತೆ ವ್ಯವಸ್ಥೆ ಮಾಡಿದ್ದರು.
ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ನಿರ್ಯಾಣೋತ್ತರ ವಾಗಿ ನೀಡಲಾಗುವ ಪದ್ಮವಿಭೂಷಣ ಪ್ರಶಸ್ತಿಯನ್ನು ಅವರ ಪರವಾಗಿ ಅವರ ಪಟ್ಟಶಿಷ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸ್ವೀಕರಿಸಲಿದ್ದಾರೆ.