ಕೊರಳಿಗೆ 3 ಕೆಜಿ ತೂಕದ ಚಿನ್ನದ ಸರ ಹಾಕ್ಕೊಂಡು ಎಂಟ್ರಿ ಕೊಟ್ಟ ಬಾಹುಬಲಿ ಹೆಸರಿನ ದೈತ್ಯ ಕೋಣ | ಟಕ್ಕರ್ ನೀಡಲು ಶಾರೂಕ್ ಮತ್ತು ಲವ್ ರಾಣಾ ರೆಡಿ !

ಹೈದ್ರಾಬಾದ್ : ಹೈದರಾಬಾದಿನ ಸಾಂಪ್ರದಾಯಿಕ ಉತ್ಸವ ಸರ್ದಾರ್ ಈ ಬಾರಿ ಮತ್ತಷ್ಟು ಕಳೆಕಟ್ಟಿದೆ. ಕಾರಣ ಕಣಕ್ಕೆ ಎಂಟ್ರಿ ಆದ ದೈತ್ಯ ದೇಹದ ಬಾಹುಬಲಿ !

ದೂರದ ಹರಿಯಾಣದಿಂದ ಕರೆದುಕೊಂಡು ಬಂದ ಬಾಹುಬಲಿ ಎಂಬ ಹೆಸರಿನ ಕೋಣ ಬರೋಬ್ಬರಿ 2000 ಕೆಜಿ ತೂಗುತ್ತಾನೆ. 7.50 ಅಡಿ ಎತ್ತರ ಮತ್ತು 18 ಅಡಿ ಉದ್ದದ ಈತನ ಮೈಕಟ್ಟಿಗೆ ಸುತ್ತಮುತ್ತ ಇಂಥವರಿಗೆ ಸಣ್ಣಗೆ ನಡುಕ. ಜನರ ಮಧ್ಯೆ ಆತ ನಡೆದು ಬಂದರೆ ಕರಿ ಬಂಡೆ ಸರಿದು ಬಂದ ಅನುಭವ. ಆ ಮಟ್ಟಿಗೆ ಇದೆ ಬಾಹುಬಲಿಯ ಮೈಕಟ್ಟು !

ಆತ ದಿನಕ್ಕೆ ಇಪ್ಪತ್ತೈದು ಲೀಟರ್, ಎಮ್ಮೆಯ ನೀರು ಬೆರೆಸದ, ದಪ್ಪ ಕೆನೆ ಬಣ್ಣದ ಹಾಲನ್ನು ಕುಡಿಯುತ್ತಾನೆ. ಪ್ರತಿನಿತ್ಯ 20 ಮೊಟ್ಟೆ ಕಾಯಂ. ದಿನಕ್ಕೆ 3 ಕೆಜಿ ಡ್ರೈಫ್ರೂಟ್ಸ್ ಆತನ ಹೆಲ್ದಿ ಡಯಟ್ ನ ಸ್ಪೆಷಲಿಟಿ. ಅಷ್ಟೇ ಅಲ್ಲದೆ ಈ ರಸಿಕ ಕೋಣಕ್ಕೆ ವಾರಕ್ಕೆ 2 ಫುಲ್ ಬಾಟಲ್ ಸ್ಕಾಚ್ ಹೀರುವ ಅಭ್ಯಾಸ ಕೂಡಾ ಉಂಟು. ಅಂದಹಾಗೆ ಲಡ್ಡು ಯಾದವ್ ಅನ್ನೋ ಶ್ರೀಮಂತ ಈತನ ಮಾಲೀಕ.


 
ಬೆಳಗ್ಗೆ ಎದ್ದರೆ, 5 ಕಿಲೋಮೀಟರ್ ವಾಕಿಂಗ್ ಹೋಗ್ತಾನೆ ಬಾಹುಬಲಿ. ಎಣ್ಣೆ ಸ್ನಾನಕ್ಕೆ ಆರ್ಡಿನರಿ ಎಣ್ಣೆ ಆತನಿಗೆ ಸರಿಬರುವುದಿಲ್ಲ. ಮಸಾಜ್ ಮಾಡಿಸಿಕೊಳ್ಳಲು ಬಾದಾಮಿ ಎಣ್ಣೆಯೇ ಆಗಬೇಕು. ಆತನ ಆರೈಕೆ ಮಾಡಲು ಇಬ್ಬರು ಫುಲ್ ಟೈಮ್ ನೌಕರರು ಜತೆಗಿದ್ದು, ಸದಾ ಆತನ ಇಷ್ಟಾನಿಷ್ಟಗಳನ್ನು ಗಮನಿಸಿಕೊಳ್ಳಲು ಇದ್ದಾರೆ.

ಈ ಸಾರಿ ಉತ್ಸವದಲ್ಲಿ ಬಾಹುಬಲಿಗೆ ಸ್ಪರ್ಧೆ ನೀಡಬಲ್ಲ ಅಂತಹ ಇನ್ನಿಬ್ಬರು ಕ್ಯಾಂಡಿಡೇಟ್ಸ್ ಹಾಕಿದ್ದಾರೆ ಹಾಜರಿ. ಒಬ್ಬ ಸಾವಿರದಿನ್ನೂರು ಕೆಜಿ ತೂಕದ ಶಾರೂಕ್. ಆತನಿಗೂ ತಿಂದ ಅನ್ನ ಆಹಾರ ಕರಗಿಸಲು ವಾರಕ್ಕೆ ಮೂರು ಸಾವಿರ ರೂಪಾಯಿಗಳ ಸ್ಕಾಚ್ !! ಮೂರನೆಯವನು ಲವ್ ರಾಣಾ. ಆತ ಸುಲ್ತಾನ್ ರಾಜಾ ಎಂಬ ನ್ಯಾಷನಲ್ ಚಾಂಪಿಯನ್ ನ ಮಗ. ಆತನಿಗೆ ದಿನಕ್ಕೆ 7 ರಿಂದ 8 ಸಾವಿರ ಖರ್ಚಾಗತ್ತೆ. ಆದ್ರೆ ಸರ್ದಾರ್ ಉತ್ಸವದ ಸಂದರ್ಭದಲ್ಲಿ ಆ ಖರ್ಚು 15000 ರೂಪಾಯಿಗೆ ಏರುತ್ತದೆ.

ಸರ್ದಾರ್ ಉತ್ಸವ ಹೈದರಾಬಾದಿನ ಅಮೀರ್ ಪೇಟೆ ಯಲ್ಲಿ ಪ್ರತಿವರ್ಷ ಆಯೋಜಿಸಲಾಗುತ್ತಿದ್ದು, ಅಲ್ಲಿನ ಯಾದವ ಕಮಿಟಿಯವರು ಉತ್ಸವವನ್ನು ಕಳೆದ 60 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ಕೋರೋನಾ ಕಾರಣದಿಂದ ದೊಡ್ಡದಾಗಿ ಆಚರಿಸಲ್ಪಟ್ಟಿಲ್ಲ. ಈ ಬಾರಿ ಸರ್ದಾರ್ ಉತ್ಸವಕ್ಕೆ ಬಾಹುಬಲಿ, ಶಾರೂಕ್ ಮತ್ತು ರಾಣಾ ಥರದವರು ರಂಗು ತುಂಬಿದ್ದಾರೆ. ಉತ್ಸವ ಜೋರಾಗಿ ನಡೆಯಲಿದೆ.

Leave A Reply

Your email address will not be published.