ವೈಕುಂಠದಲ್ಲಿ ಅಣ್ಣಾವ್ರ ಜೊತೆ ‘ಅಪ್ಪು’ ಕಣ್ಣಾಮುಚ್ಚಾಲೆ | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಫೋಟೋ

ದೊಡ್ಮನೆ ಮಗನಾಗಿ, ಸ್ವಚ್ಛ ಸಿನಿಮಾಗಳ ನಟನಾಗಿ, ದುರ್ಬಲರ ಜೀವನದ ಆಶಾಕಿರಣವಾಗಿ ಬಾಳಿ ಬದುಕಿ ಸಾಧಿಸಿ ಇದೀಗ ಎಳೆ ವಯಸ್ಸಿನಲ್ಲೇ ಕಣ್ಮರೆಯಾಗಿ ಹೋಗಿದ್ದಾರೆ ಪುನೀತ್‌ ರಾಜ್‌ಕುಮಾರ್. ನಟನ ಸಾವು ಇಡೀ ಚಿತ್ರರಂಗ, ಕುಟುಂಬ, ಅಭಿಮಾನಿಗಳನ್ನು ಕಂಗಾಲಾಗಿಸಿದೆ. ಇದನ್ನು ಅಪ್ಪು ಅಭಿಮಾನಿಗಳು ಇಂದಿಗೂ ನಂಬಲು ಸಿದ್ಧರಿಲ್ಲ. ಅವರ ಸ್ವಚ್ಛ ನಗು, ತಿಳಿಯುವ ತುಡಿತದ ಕಣ್ಣುಗಳು, ಪುಟ್ಟ ಮಗುವಿನ ಹಾಗೇ ನಾಚಿ ನೀರಾಗುವ ವಿನಯ,ಅಪ್ಪು ನೆನಪುಕ್ಕಿಸುವ ಇಂತಹ ಹಲವು ವಿಷಯಗಳು ಸದಾ ಕಣ್ಣುಮುಂದೆ ಇರುತ್ತದೆ.

ನೆನೆದಷ್ಟು ನೂರ್ಮಡಿಯಾಗುತ್ತಿರುವ ಅಪ್ಪು ಈಗ ನೆನಪು ಮಾತ್ರ! ಕಲಾವಿದರ ಕುಂಚದಲ್ಲಿ ಪುನೀತ್‌ ಬಗೆಗಿನ ಅಭಿಮಾನ ಬೇರೆಯದೇ ರೂಪ ಪಡೆಯುತ್ತಿವೆ. ಈಗ ‘ಅಪ್ಪು–ಅಪ್ಪಾಜಿಯ’ ವೈಕುಂಠದ ಚಿತ್ರ ಅಭಿಮಾನಿಗಳ ಮನಗೆದ್ದಿದೆ. ಸಿನಿಮಾ ತಾರೆಯರು, ಸೆಲೆಬ್ರಿಟಿಗಳು, ಪುನೀತ್‌ ಅಭಿಮಾನಿಗಳು ಸೇರಿದಂತೆ ಹಲವರ ವಾಟ್ಸ್‌ಆ್ಯಪ್‌ ಡಿಪಿ, ಸಾಮಾಜಿಕ ಮಾಧ್ಯಮಗಳ ಸ್ಟೇಟಸ್‌, ಪೋಸ್ಟ್‌ಗಳಲ್ಲಿ ಈ ಚಿತ್ರ ಹರಿದಾಡುತ್ತಿದೆ.

ಯಾವುದೋ ಲೋಕದ ಕಸ್ತೂರಿ ನಿವಾಸದಂತಹ ಒಂದು ಜಾಗ, ಅಲ್ಲೊಂದು ಬಂಗಾರದ ಆಸನ ಮತ್ತು ಅದರ ಮೇಲೆ ಬಿಳಿಯ ಪಂಚೆ–ಶರ್ಟು ಧರಿಸಿ ಕುಳಿತ ಅಣ್ಣಾವ್ರು. ಅವರ ಅಕ್ಕ–ಪಕ್ಕದಲ್ಲಿರುವ ಕಂಬಗಳ ಮೇಲೆ ಪಾರಿವಾಳಗಳು; ಮುಂದೆ ಏನನ್ನೋ ಕಾಣುತ್ತ ಕುಳಿತ ಅಣ್ಣಾವ್ರಿಗೆ ಹಿಂದಿನಿಂದ ಬಂದು ಕಣ್ಣು ಮುಚ್ಚಿರುವ ಅಪ್ಪು. ‘ಅಪ್ಪಾಜಿ ನಾನು ಯಾರು ಹೇಳಿ….’ ಎಂದು ಕೇಳಿ ನಗುತ್ತಿರುವಂತಿದೆ.

ಕಲಾವಿದ ಕರಣ್‌ ಆಚಾರ್ಯ ಸೃಜಿಸಿರುವ ಈ ಚಿತ್ರವು ಅಪ್ಪು ಅಭಿಮಾನಿಗಳನ್ನು ಥಟ್ಟನೆ ಸೆಳೆದುಕೊಳ್ಳುತ್ತಿದೆ. ಬಹುಬೇಗ ಅಗಲಿದ ಪುನೀತ್‌, ತಂದೆ ರಾಜ್‌ಕುಮಾರ್‌ ಅವರನ್ನು ಭೇಟಿಯಾಗಿರುವಂತಹ ಕಾಲ್ಪನಿಕ ಕ್ಷಣಕ್ಕೆ ಕರಣ್‌ ಇಲ್ಲಿ ಚಿತ್ರ ರೂಪ ನೀಡಿದ್ದಾರೆ. ಕೆಲವು ವರ್ಷಗಳ ಹಿಂದೆ, ‘ಕು‍ಪಿತ ಆಂಜನೇಯನ’ (ಆ್ಯಂಗ್ರಿ ಹನುಮಾನ್) ವಿನ್ಯಾಸದಿಂದ ಕರಣ್‌ ಸುದ್ದಿಯಾಗಿದ್ದರು. ಈಗ ಅವರು ಸಿನಿಮಾಗಳಿಗೆ ಪೋಸ್ಟರ್‌ ಡಿಸೈನ್‌ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರ ಕಂಡು ‘ಗಂಧದಗುಡಿಯ ರಾಜ ಮತ್ತು ರಾಜಕುಮಾರ.. ವೈಕುಂಠದ “ಕಸ್ತೂರಿ ನಿವಾಸ” ಬೆಳಗುತ್ತಿದೆ. ಇಷ್ಟು ಬೇಗ ಆಗಬಾರದಿತ್ತಷ್ಟೇ..’ ಎಂದು ಟ್ವೀಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

https://twitter.com/karanacharya7/status/1456003947869577219?s=20

ಅಣ್ಣಾವ್ರು ಕಾಲಿನ ಮೇಲೆ ಕಾಲು ಹಾಕಿ ಕೂರುತ್ತಿರಲಿಲ್ಲ, ಅದನ್ನು ಬದಲಿಸಬಹುದಿತ್ತು, ಚೆನ್ನಾಗಿದೆ ಅಷ್ಟೇ ನೋವಾಗುತ್ತೆ. ಹೀಗೆ ಚಿತ್ರದ ಕುರಿತು ನೂರಾರು ಪ್ರತಿಕ್ರಿಯೆಗಳು ಬಂದಿವೆ ಹಾಗೂ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಬಾರಿ ಈ ಟ್ವೀಟ್‌ ಮರು ಹಂಚಿಕೆಯಾಗಿದೆ.

Leave A Reply

Your email address will not be published.